ಶ್ರೀನಗರ: ಕಳೆದ 48 ಗಂಟೆಗಳಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆರು ಭಯೋತ್ಪಾದಕರು ಹತರಾಗಿದ್ದು ಈ ಪೈಕಿ ಓರ್ವ ಪೊಲೀಸ್ ಅಧಿಕಾರಿಯ ಹಂತಕನೂ ಸೇರಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅನಂತನಾಗ್ ಗ್ರಾಮದ ಕಲನ್ ಸಿರ್ಗುಫ್ವಾರಾ ಪ್ರದೇಶದಲ್ಲಿ ಭಯೋತ್ಪಾದಕನ ಅಡಗಿರುವ ಬಗ್ಗೆ ನಿಖರ ಮಾಹಿತಿ ಆಧಾರದ ಮೇಲೆ ಜಮ್ಮು ಪೊಲೀಸ್ ಮತ್ತು ಸೇನೆ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಭಯೋತ್ಪಾದಕನ ಉಪಸ್ಥಿತಿಯು ಪತ್ತೆಯಾದ ಕಾರಣ, ಅವರಿಗೆ ಶರಣಾಗಲು ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಇದನ್ನು ಒಪ್ಪದ ಉಗ್ರರು ಸೇನೆ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದಕ್ಕೆ ಪ್ರತೀಕಾರವಾಗಿ ಸೇನೆ ಸಹ ಗುಂಡಿನ ದಾಳಿ ನಡೆಸಿದ್ದು ಆರು ಮಂದಿ ಹತರಾಗಿದ್ದಾರೆ.
ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್-ಜನರಲ್ ಮಾಹಿತಿ ನೀಡಿರುವ ಪ್ರಕಾರ, ಮೃತ ಉಗ್ರನನ್ನು ಕಡಿಪೋರಾ ಪ್ರದೇಶದ ನಿವಾಸಿ ಫಹೀಂ ಭಟ್ ಎಂದು ಗುರುತಿಸಲಾಗಿದ್ದು, ಈತ ಬಿಜ್‌ಬೆಹರಾ ಪೊಲೀಸ್ ಠಾಣೆಯ ಎಎಸ್‌ಐ ಮೊಹಮ್ಮದ್ ಅಶ್ರಫ್ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ.
ಆತನಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.