ನವದೆಹಲಿ: ದೇಶಾದ್ಯಂತ 'ಘರ್ ಘರ್ ದಸ್ತಾಕ್ ' ಕೋವಿಡ್-19 ಲಸಿಕಾ ಅಭಿಯಾನ ನಡೆಯುತ್ತಿದ್ದರೂ ನ. 30 ರವರೆಗೂ ಮೊದಲ ಡೋಸ್ ಲಸಿಕೆ ಪಡೆದವರ ಸಂಖ್ಯೆಯಲ್ಲಿ ಶೇ. 5.9 ರಷ್ಟು ಹೆಚ್ಚಳವಾಗಿದ್ದರೆ ಎರಡನೇ ಡೋಸ್ ಲಸಿಕೆ ನೀಡಿಕೆಯಲ್ಲಿ ಶೇ.11.7 ರಷ್ಟು ಏರಿಕೆಯಾಗಿದೆ. ತಾತ್ಕಾಲಿಕ ವರದಿ ಪ್ರಕಾರ ದೇಶದಲ್ಲಿ ಕೇವಲ ಶೇ. 49 ರಷ್ಟು ಜನರು ಮಾತ್ರ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಮಾಹಿತಿ ಪ್ರಕಾರ, ಗುರುವಾರದವರೆಗೂ ಕೋವಿಡ್ -19 ಲಸಿಕೆ ಲಸಿಕೆ ಪಡೆದವರ ಸಂಖ್ಯೆ 125 ಕೋಟಿ ದಾಟಿದೆ. ಆದರೆ, 79.13 ಕೋಟಿ (ಶೇ.84.3 ) ಫಲಾನುಭವಿಗಳು ಮಾತ್ರ ಮೊದಲ ಡೋಸ್ ಪಡೆದಿದ್ದರೆ ಕೇವಲ 45.82 ಕೋಟಿ ( ಶೇ.49 ) ಜನರು ಮಾತ್ರ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 18 ರಿಂದ 44 ವರ್ಷದೊಳಗಿನ 46,28,14,781 ಜನರು ಮೊದಲ ಡೋಸ್ ಪಡೆದಿದ್ದರೆ, ಇದೇ ಗುಂಪಿನ 23,38,72,325 ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಇದೇ ರೀತಿಯಲ್ಲಿ 45 ರಿಂದ 59 ವರ್ಷದೊಳಗಿನ 18,57,50,859 ಜನರು ಮೊದಲ ಡೋಸ್ ಪಡೆದಿದ್ದರೆ, ಇದೇ ಗುಂಪಿನ 12,33,19,876 ಜನರು ಎರಡನೇ ಡೋಸ್ ಪಡೆದಿದ್ದಾರೆ. 60 ವರ್ಷದೊಳಗಿನ 8,06,10,843 ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದರೆ 11,63,10,847 ಜನರು ಮೊದಲ ಡೋಸ್ ಪಡೆದುಕೊಂಡಿದ್ದಾರೆ.
ಒಟ್ಟಾರೇ, 1,03,84,113 ಆರೋಗ್ಯ ಕಾರ್ಯಕರ್ತರು ಮತ್ತು 1,83,79,693 ಮುಂಚೂಣಿ ಕಾರ್ಯಕರ್ತರು ಮೊದಲ ಡೋಸ್ ಪಡೆದಿದ್ದರೆ 95,21,499 ಆರೋಗ್ಯ ಕಾರ್ಯಕರ್ತರು ಹಾಗೂ 1,65,40,678 ಮುಂಚೂಣಿ ಕಾರ್ಯಕರ್ತರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೂ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಿಗೆ 138 ಕೋಟಿ ಗೂ ಹೆಚ್ಚು ಡೋಸ್ ಕೋವಿಡ್ ಲಸಿಕೆಯನ್ನು ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.