ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೂ ಕೊರೋನಾ ರೂಪಾಂತರಿ ಹೊಸ ತಳಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ವಿದೇಶ ಪ್ರಯಾಣದ ಇತಿಹಾಸ ಹೊಂದಿದ್ದ ನಾಲ್ವರಿಗೆ ಓಮಿಕ್ರಾನ್ ರೂಪಾಂತರಿ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ವಾಪಸ್ಸಾಗಿದ್ದ ಸೂರತ್ ನ ವ್ಯಕ್ತಿಯೊಬ್ಬರಿಗೆ ಹೊಸ ಕೊರೋನಾ ರೂಪಾಂತರಿ ಕಂಡುಬಂದಿದೆ.
ನವೆಂಬರ್ 26 ರಂದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ಹೊಸ ಕೋವಿಡ್-19 ರೂಪಾಂತರಿಯನ್ನು ಓಮಿಕ್ರಾನ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಸರಿಸಿತ್ತು. ರಾಜಸ್ಥಾನದಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ. ಈ ಎಲ್ಲಾ ರೋಗಿಗಳ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ರಾಜ್ಯದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಎಲ್ಲಾ ಓಮಿಕ್ರಾನ್ ಪ್ರಕರಣಗಳ ಪರೀಕ್ಷೆಯಲ್ಲಿ ಇದೀಗ ಕೋವಿಡ್ ನೆಗೆಟಿವ್ ವರದಿಯಾಗಿದೆ.
ಐರ್ಲೆಂಡ್ ನಿಂದ ಆಂಧ್ರ ಪ್ರದೇಶಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಡಿಸೆಂಬರ್ 11 ರಂದು ಓಮಿಕ್ರಾನ್ ರೂಪಾಂತರಿ ಪತ್ತೆಯಾಗಿತ್ತು. 14 ದಿನಗಳ ನಂತರ ಆತನಿಗೆ ಕೋವಿಡ್ ನೆಗೆಟಿವ್ ನೆಗೆಟಿವ್ ಬಂದಿದ್ದು, ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲರಿಗೂ ನೆಗೆಟಿವ್ ಬಂದಿರುವುದಾಗಿ ಆಂಧ್ರ ಪ್ರದೇಶ ಸರ್ಕಾರದ ಆರೋಗ್ಯ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾದ ಪ್ರಜೆಗೆ ತಪ್ಪಾಗಿ ಆರ್ ಟಿ- ಪಿಸಿಆರ್ ವರದಿ ನೀಡಿದ್ದಕ್ಕಾಗಿ ನಾಲ್ವರನ್ನು ಬಂಧಿಸಲಾಗಿದೆ. ಆತನಿಗೆ ತದನಂತರ ಓಮಿಕ್ರಾನ್ ಪತ್ತೆಯಾಗಿತ್ತು. ಕ್ವಾರಂಟೈನ್ ನಲ್ಲಿದ್ದ ಆ ರೋಗಿ ನಕಲಿ ವರದಿ ತೋರಿಸಿ ದುಬೈ ಮೂಲಕ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಎಂದು ಬೆಂಗಳೂರು ಸೆಂಟ್ರಲ್ ಡಿಸಿಪಿ ಹೇಳಿದ್ದಾರೆ.