ನವದೆಹಲಿ: ಸಾಂಕ್ರಾಮಿಕ ಸಮಯದಲ್ಲಿ ವಿವಿಧ ದೇಶಗಳಲ್ಲಿ ವಾಸಿಸುವ ಒಟ್ಟು 4,048 ಭಾರತೀಯರು ಕೋವಿಡ್ -19 ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆ ಪೈಕಿ ಸೌದಿ ಅರೇಬಿಯಾದ ಅತಿ ಹೆಚ್ಚು ಅಂದರೆ 1,154 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.
ಯುಎಇಯಲ್ಲಿ ನೆಲೆಸಿದ್ದ 894 ಭಾರತೀಯರು, ಕುವೈತ್‌ನಲ್ಲಿ ನೆಲೆಸಿದ್ದ 668 ಭಾರತೀಯರು ಮತ್ತು ಒಮನ್ ನಲ್ಲಿ ನೆಲೆಸಿದ್ದ 551 ಭಾರತೀಯರು ಕೋವಿಡ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಲೋಕಸಭೆಗೆ ಮಾಹಿತಿ ನೀಡಿದೆ.
ಅಧಿಕೃತ ಮಾಹಿತಿಯ ಪ್ರಕಾರ, 75 ವಿವಿಧ ದೇಶಗಳಲ್ಲಿ ನೆಲೆಸಿದ್ದ ಒಟ್ಟು 4048 ಭಾರತೀಯರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಹ್ರೇನ್‌ನಲ್ಲಿ ಕೆಲಸ ಮಾಡುತ್ತಿರುವ 200 ಭಾರತೀಯರು, ಕತಾರ್‌ನಲ್ಲಿ 109, ನೇಪಾಳದಲ್ಲಿ 43, ನೈಜೀರಿಯಾದಲ್ಲಿ 34 ಮತ್ತು ಉಳಿದವರು ಇತರ ದೇಶಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.