ನವದೆಹಲಿ: ಬಾಂಗ್ಲಾ ವಿಮೋಚನೆ ಭಾರತ-ಪಾಕಿಸ್ತಾನ ಯುದ್ಧಕ್ಕೆ 50 ವರ್ಷಗಳಾಗಿದ್ದು, ಬಾಂಗ್ಲಾ ವಿಮೋಜನೆಗೆ ಕಾರಣವಾದ ಯುದ್ಧದ ಗೆಲುವಿನ ಸ್ವರ್ಣ ಸಂಭ್ರಮಾಚರಣೆಯ ದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ್ ಮಾಷಲ್ ಜ್ಯೋತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಬೆಳಗಿದರು.
ಈ ಮೂಲಕ ಸ್ವರ್ಣಿಮ್ ವಿಜಯ ವರ್ಷ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ, ವರ್ಷಾಚರಣೆ ಸಂಬಂಧ ಅಂಚೆ ಚೀಟಿ ಬಿಡುಗಡೆಗೊಳಿಸಿದರು.
ಕಳೆದ ವರ್ಷ ದೇಶದ ನಾಲ್ಕು ದಿಕ್ಕುಗಳಿಗೆ ಕೊಂಡೊಯ್ಯಲಾಗಿದ್ದ ಜ್ಯೋತಿಯನ್ನು ಇಂದು ಶಾಶ್ವತ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತದೆ.
1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಸೇನಾಪಡೆ ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಇದರಿಂದಾಗಿ ಒಂಬತ್ತು ಮಿಲಿಯನ್ ನಿರಾಶ್ರಿತರು ಭಾರತದೊಳಕ್ಕೆ ನುಸುಳುವಂತೆ ಆಗಿತ್ತು. ಈ ವೇಳೆ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ನಡೆಸುತ್ತಿದ್ದ ಕೃತ್ಯವನ್ನು ವಿರೋಧಿಸಿದ ಬಾಂಗ್ಲಾದೇಶಕ್ಕೆ ಭಾರತ ಬೆಂಬಲ ನೀಡಿತ್ತು.
ಬಾಂಗ್ಲಾದೇಶ ವಿಮೋಚನೆಗೆ ಭಾರತ ಬೆಂಬಲ ನೀಡಿದ್ದು, ಪಾಕಿಸ್ತಾನದ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್ ಗೆ ತೀವ್ರ ಹಿನ್ನಡೆಯಾದಂತಾಗಿತ್ತು. ಅಲ್ಲದೇ 1971ರ ಡಿಸೆಂಬರ್ 3ರಂದು ಪೂರ್ವ ಪಾಕಿಸ್ತಾನದ ಜನರನ್ನು ರಕ್ಷಿಸುವ ನಿಟ್ಟನಲ್ಲಿ ಪಾಕಿಸ್ತಾನದ ವಿರುದ್ಧ ಸಮರ ನಡೆಸಲು ಸಜ್ಜಾಗಿ ಎಂದು ಭಾರತೀಯ ಸೇನೆಗೆ ಭಾರತದ ಸರ್ಕಾರ ಆದೇಶ ನೀಡಿತ್ತು.
ಬಂಗಾಳಿ ಮುಸ್ಲಿಮರು ಮತ್ತು ಹಿಂದೂಗಳನ್ನು ರಕ್ಷಿಸುವ ನಿಟ್ಟಿನಲ್ಲಿ 1971ರ ಡಿಸೆಂಬರ್ 03ರಂದು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸಲು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಕೇವಲ 13 ದಿನಗಳ ಕಾಲ ಭಾರತ ಮತ್ತು ಪಾಕ್ ಯೋಧರ ನಡುವೆ ಸಮರ ನಡೆದಿತ್ತು. ಕೊನೆಗೂ ಧೀರ ಭಾರತೀಯ ಯೋಧರ ಶಕ್ತಿಯ ಮುಂದೆ ಪಾಕ್ ಸೇನೆ ಮಂಡಿಯೂರಿತ್ತು.
1971ರ ಡಿಸೆಂಬರ್ 16ರಂದು (ಈ ದಿನದಂದು), ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ಬಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಬೇಷರತ್ತಾಗಿ ಶರಣಾಗಿದ್ದರು. ಯುದ್ಧದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಜನ್ಮತಳೆದಿತ್ತು. ಈ ಯುದ್ಧದ ಅಂತ್ಯದ ಬಳಿಕ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲಾಯಿತು.