ನವದೆಹಲಿ: ಮಹಾರಾಷ್ಟ್ರದಲ್ಲಿ ಭಾನುವಾರ ಓಮಿಕ್ರಾನ್ ಕೋವಿಡ್-19 ರೂಪಾಂತರಿ ಸೋಂಕು ಹರಡಿರುವ 6 ಹೊಸ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 151 ಕ್ಕೆ ಏರಿಕೆಯಾಗಿದೆ.
ಈ ನಡುವೆ ಬ್ರಿಟನ್ ನಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ 45 ವರ್ಷದ ಎನ್‌ಆರ್‌ಐ ಮತ್ತು ಹದಿಹರೆಯದ ಹುಡುಗನಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಓಮಿಕ್ರಾನ್ ಪ್ರಕರಣಗಳು 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ- ಮಹಾರಾಷ್ಟ್ರ (54) ದೆಹಲಿ (22) ರಾಜಸ್ಥಾನ (17) ಕರ್ನಾಟಕ (14) ತೆಲಂಗಾಣ (20) ಗುಜರಾತ್ (9) ಕೇರಳ (11) ಆಂಧ್ರಪ್ರದೇಶ (1) ಚಂಡೀಗಢ (1) ತಮಿಳುನಾಡು (1) ಪಶ್ಚಿಮ ಬಂಗಾಳ (1) ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ 6 ಪ್ರಕರಣಗಳು ವರದಿಯಾಗುವ ಮೂಲಕ ಆ ರಾಜ್ಯದಲ್ಲಿನ ಓಮಿಕ್ರಾನ್ ಸೋಂಕಿತರ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೋಂಕು ತಗುಲಿಸಿಕೊಂಡಿರುವ 6 ಮಂದಿಯ ಪೈಕಿ 5 ಮಂದಿ ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದಾರೆ. 54 ಪ್ರಕರಣಗಳ ಪೈಕಿ 22 ಪ್ರಕರಣಗಳು ಮುಂಬೈ ನಲ್ಲಿ ಪತ್ತೆಯಾಗಿದೆ.