ಪಟ್ನಾ: ಬಿಹಾರದ ಮುಜಪ್ಫರ್‌ಪುರದಲ್ಲಿ ಇತ್ತೀಚೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ಇನ್ನೂ 40 ಮಂದಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಇದರೊಂದಿಗೆ, ಶಸ್ತ್ರಚಿಕಿತ್ಸೆಗೆ ಒಳಗಾದ 65 ಮಂದಿ ಈವರೆಗೆ ಸಮಸ್ಯೆಗೆ ಸಿಲುಕಿದಂತಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪಟ್ನಾ: ಬಿಹಾರದ ಮುಜಪ್ಫರ್‌ಪುರದಲ್ಲಿ ಇತ್ತೀಚೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ಇನ್ನೂ 40 ಮಂದಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಇದರೊಂದಿಗೆ, ಶಸ್ತ್ರಚಿಕಿತ್ಸೆಗೆ ಒಳಗಾದ 65 ಮಂದಿ ಈವರೆಗೆ ಸಮಸ್ಯೆಗೆ ಸಿಲುಕಿದಂತಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನವೆಂಬರ್ 22ರಿಂದ 27ರ ಅವಧಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರ ಕಣ್ಣಿಗೆ ತೀವ್ರವಾದ ಸೋಂಕು ತಗುಲಿದೆ. ಈವರೆಗೆ ಪುಜಪ್ಫರ್‌ಪುರ ಮತ್ತು ಪಟ್ನಾದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 12 ಮಂದಿ ಸೋಂಕಿತರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಇನ್ನುಳಿದ 53 ಮಂದಿಗೂ ಒಂದು ಕಣ್ಣನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಬೇಕಾದ ಪರಿಸ್ಥಿತಿ ಬಂದೊದಗಿದೆ.
ಮುಜಪ್ಫರ್‌ಪುರದ ಜುರಾನ್ ಛಾಪ್ರಾ ಪ್ರದೇಶದ ಕಣ್ಣಿನ ಆಸ್ಪತ್ರೆಯೊಂದು ನವೆಂಬರ್ 22ರಂದು ಕಣ್ಣಿನ ತಪಾಸಣೆ ಶಿಬಿರ ನಡೆಸಿತ್ತು. ತಪಾಸಣೆಯ ಬಳಿಕ 100ಕ್ಕೂ ಹೆಚ್ಚು ಮಂದಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು.
ಕಣ್ಣಿನ ವೈದ್ಯ ಎನ್.ಡಿ.ಸಾಹು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದರು. ಸಾಹು ಅವರಿಗೆ ಹೆಚ್ಚಿನ ಅನುಭವ ಇಲ್ಲದಿರುವುದು ಬಳಿಕ ತಿಳಿದುಬಂದಿದೆ. ಶಸ್ತ್ರಚಿಕಿತ್ಸೆಯ ಬಳಿಕ ಅನೇಕ ಮಂದಿ ಕಣ್ಣುಗಳಲ್ಲಿ ನೋವು ಕಾಣಿಸಿಕೊಂಡಿರುವ ಬಗ್ಗೆ ತಿಳಿಸಿದ್ದರು. ಅವರಿಗೆಲ್ಲ ನೋವು ನಿವಾರಕ ಚುಚ್ಚುಮದ್ದು ನೀಡಲಾಗಿತ್ತು.
'ಹೆಚ್ಚು ಸಂಖ್ಯೆಯಲ್ಲಿ ಕಣ್ಣಿನ ಸೋಂಕು ತಗುಲಿರುವ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಈ ಕುರಿತು ತನಿಖೆ ನಡೆಸಲು ಮುಜಪ್ಫರ್‌ಪುರ ಜಿಲ್ಲೆಯ ಅಂಧತ್ವ ನಿಯಂತ್ರಣ ಅಧಿಕಾರಿ ನೇತೃತ್ವದ ತಂಡವನ್ನು ರಚಿಸಲಾಗಿದೆ. ಈ ತಂಡವು ಈಗಾಗಲೇ ಶಸ್ತ್ರಚಿಕಿತ್ಸೆ ನಡೆದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಶುಚಿತ್ವಕ್ಕೆ ಸಂಬಂಧಿಸಿದ ಅನೇಕ ಅಂಶಗಳನ್ನು ಪಾಲಿಸುವಲ್ಲಿ ಆಸ್ಪತ್ರೆ ವಿಫಲವಾಗಿದೆ' ಎಂದು ಮುಜಪ್ಫರ್‌ಪುರದ ಸಿವಿಲ್ ಸರ್ಜನ್ ವಿನಯ್ ಕುಮಾರ್ ಶರ್ಮಾ ಹೇಳಿದ್ದಾರೆ.
ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯ ಎನ್.ಡಿ.ಸಾಹು ಅವರ ವೈದ್ಯಕೀಯ ಪ್ರಮಾಣಪತ್ರ ರದ್ದುಗೊಳಿಸುವಂತೆಯೂ ತನಿಖಾ ತಂಡ ಶಿಫಾರಸು ಮಾಡಿದೆ ಎಂದು ಅವರು ತಿಳಿಸಿದ್ದಾರೆ.