ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಧರಿಸುವ ವಸ್ತ್ರಗಳು, ಬಳಸುವ ವಸ್ತುಗಳ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮಾ ಭೇಟಿ ವೇಳೆ ಮೋದಿ ಅವರು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಸೂಟ್ ಧರಿಸಿದ್ದರು.
ಈ ಹಿಂದೆ ಅವರು ಧರಿಸಿದ್ದ ಮೇಬಾಶ್ ಸನ್ ಗ್ಲಾಸ್ ಕೂಡ ಸುದ್ದಿಯಾಗಿತ್ತು. ಈಗ ಹೊಸದಾಗಿ ಪ್ರಧಾನಿ ಮೋದಿ ಅವರು ಬಳಸುತ್ತಿರುವ ಶಸ್ತ್ರಸಜ್ಜಿತ ಮರ್ಸಿಡೀಸ್ ಮೇಬ್ಯಾಕ್ ಎಸ್ 650 ಎಲ್ಲರ ಗಮನ ಸೆಳೆದಿದೆ.
ಇತ್ತೀಚಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರು ದೆಹಲಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಹೈದರಾಬಾದ್ ಹೌಸ್‌ಗೆ ಆಗಮಿಸಿದ ಮೋದಿ ಅವರು ಮೊದಲು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡರು. ಈ ಮೂಲಕ ಮೋದಿ ಬೆಂಗಾವಲು ಪಡೆಗೆ ಹೊಸ ವಾಹನ ಸೇರ್ಪಡೆಯಾಗಿದೆ ಮತ್ತು ಪ್ರಧಾನಿ ಮೋದಿ ಅವರ ಭದ್ರತಾ ವಾಹನಗಳು ರೇಂಜ್ ರೋವರ್ ವೋಗ್ ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್‌ನಿಂದ ಉನ್ನತೀಕರಣಗೊಂಡಂತಾಗಿದೆ.
ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಈ ಕಾರಿನ ಬೆಲೆ ಸುಮಾರು 12 ಕೋಟಿ ರೂಗಳಿಗೆ ಹೆಚ್ಚು ಎಂದು ತಿಳಿದುಬಂದಿದೆ.
ಮರ್ಸಿಡೆಸ್-ಮೇಬ್ಯಾಚ್ ಎಸ್650 ಗಾರ್ಡ್ ವಿಆರ್10 ಮಟ್ಟದ ರಕ್ಷಣೆಯುಳ್ಳ ಅತ್ಯಾಧುನಿಕ ಸವಲತ್ತುಗಳ ಮಾಡೆಲ್ ಆಗಿದೆ. ಇದು ಕಾರ್ ಒಂದರಲ್ಲಿ ನೀಡುವ ಅತಿ ಹೆಚ್ಚಿನ ರಕ್ಷಣಾ ಸೌಲಭ್ಯವಾಗಿದ್ದು, ಎರಡು ಮೀಟರ್ ದೂರದಲ್ಲಿ 15 ಕೆಜಿ ಟಿಎನ್‌ಟಿ ಸ್ಫೋಟ ಸಂಭವಿಸಿದರೂ ರಕ್ಷಣೆ ನೀಡುತ್ತದೆ. ಸ್ಫೋಟದಿಂದ ಕಾಪಾಡಲು ವಾಹನದ ಕೆಳಭಾಗದಲ್ಲಿ ವಿಶೇಷ ಭದ್ರತಾ ತಂತ್ರಜ್ಞಾನ, ಕಿಟಕಿ ಗಾಜುಗಳಿಗೆ ಪ್ರಬಲ ಗುಂಡು ನಿರೋಧಕ ಅಳವಡಿಸಲಾಗಿದೆ.