ನವದೆಹಲಿ: ಓಮಿಕ್ರಾನ್ ಹೊರತಾಗಿಯೂ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,822 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಕಳೆದ 558 ದಿನಗಳಲ್ಲಿ ದೇಶದಲ್ಲಿ ವರದಿಯಾದ ಹೊಸ ಪ್ರಕರಣಗಳಲ್ಲಿ ಅತಿ ಕಡಿಮೆ ಸಂಖ್ಯೆ ಇದಾಗಿದೆ.
ಕಳೆದ 24 ಗಂಟೆಗಳಲ್ಲಿ ಪತ್ತೆಯಾದ 6,822 ಹೊಸ ಪ್ರಕರಣಗಳ ಪೈಕಿ 3,277 ಹೊಸ ಪ್ರಕರಣಗಳು ಕೇರಳದಿಂದಲೇ ವರದಿಯಾಗಿದೆ. ಆದಾಗ್ಯೂ, ದೇಶದಲ್ಲಿ ಸದ್ಯ ಪ್ರಸ್ತುತ ಪ್ರಕರಣಗಳ ಸಂಖ್ಯೆ 95, 014ಕ್ಕೆ ತಲುಪಿದೆ. ಇದು ಕಳೆದ 554 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಾರ, ದೇಶದಲ್ಲಿ ಸಕ್ರಿಯ ಪ್ಕಕರಣಗಳ ಸಂಖ್ಯೆ ಒಟ್ಟಾರೇ ಸಂಖ್ಯೆಯಲ್ಲಿ ಶೇಕಡಾ 1ಕ್ಕಿಂತಲೂ ಕಡಿಮೆಯಿದೆ. ಪ್ರಸ್ತುತ ಶೇ. 0.27 ರಷ್ಟು ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ 10, 004 ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೇ ಗುಣಮುಖರಾದವರ ಸಂಖ್ಯೆ 3,40,79,612ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇ. 98.36 ರಷ್ಟಿದೆ.