ಶ್ರೀನಗರ: ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ಬಳಿಕ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆಗೆ ರಚಿಸಲಾಗಿದ್ದ ಆಯೋಗದ ವರದಿಗೆ ಕಾಶ್ಮೀರದ ಸ್ಥಳೀಯ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಆಯೋಗ ತನ್ನ ವರದಿಯಲ್ಲಿ ಕಾಶ್ಮೀರಕ್ಕೆ 1 ಕ್ಷೇತ್ರ, ಜಮ್ಮುವಿಗೆ 6 ಕ್ಷೇತ್ರಗಳನ್ನು ಹೊಸದಾಗಿ ಸೇರ್ಪಡೆ ಮಾಡುವ ಪ್ರಸ್ತಾವ ಮುಂದಿಟ್ಟಿದೆ.
ಈ ವರದಿಗೆ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಹಾಗೂ ಪಿಡಿಪಿ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಶಿಫಾರಸ್ಸುಗಳನ್ನು ಸ್ವೀಕರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.
ಡೀಲಿಮಿಟೇಷನ್ ನ್ನು 2011 ರ ಜನಗಣತಿಗೆ ಅನುಗುಣವಾಗಿ ನಡೆಸಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನ ಕಾರ್ಯಾಧ್ಯಕ್ಷ, ಮಾಜಿ ಸಿಎಂ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಆಯೋಗ ಬಿಜೆಪಿಯ ರಾಜಕೀಯ ಅಜೆಂಡಾಗೆ ಅವಕಾಶ ನೀಡಿದಂತಿದೆ. ಡೇಟಾ ಬದಲು ಬಿಜೆಪಿಯ ಆಣತಿಯನ್ನು ಆಧಾರವಾಗಿಟ್ಟುಕೊಂಡು ಶಿಫಾರಸುಗಳನ್ನು ಸಿದ್ಧಪಡಿಸಿದಂತಿದೆ, ವೈಜ್ಞಾನಿಕ ವಿಧಾನ ಪಾಲನೆಯ ಭರವಸೆ ನೀಡಲಾಗಿತ್ತು. ಆದರೆ ಇಲ್ಲಿ ಅದು ರಾಜಕೀಯ ವಿಧಾನವಾಗಿ ಮಾರ್ಪಾಡಾಗಿದೆ ಎಂದು ಎನ್ ಸಿ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ 87 ವಿಧಾನಸಭಾ ಕ್ಷೇತ್ರಗಳಿದ್ದವು. ಈ ಪೈಕಿ 46 ಕಾಶ್ಮೀರದಲ್ಲಿ ಹಾಗೂ 37 ಜಮ್ಮುವಿನಲ್ಲಿ 4 ಲಡಾಖ್ ನಲ್ಲಿ 24 ಪಿಒಕೆಯಲ್ಲಿ ಮೀಸಲು ಕ್ಷೇತ್ರವಾಗಿದ್ದವು.
ಈಗ ಆರ್ಟಿಕಲ್ 370 ರದ್ದಗಿ ಬಳಿಕ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 90 ಕ್ಕೆ ಏರಿಕೆಯಾಗಲಿದೆ.