ನವದೆಹಲಿ: ದೇಶಾದ್ಯಂತ ಇರುವ 70,000 ಪೆಟ್ರೋಲ್ ಪಂಪ್‌ಗಳ ಪೈಕಿ 22,000 ಪೆಟ್ರೋಲ್ ಪಂಪ್ ಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಈ ಬಗ್ಗೆ ಉತ್ತರ ನೀಡಿದ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಮಹೇಂದ್ರ ನಾಥ್ ಪಾಂಡೆ, ಎಕ್ಸ್‌ಪ್ರೆಸ್ ಹೆದ್ದಾರಿಗಳು, ಹೆದ್ದಾರಿಗಳು ಮತ್ತು ಜನನಿಬಿಡ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇಂತಹ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಭಾರತದಲ್ಲಿ(ಹೈಬ್ರಿಡ್) ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ(ಫೇಮ್ ಇಂಡಿಯಾ)-II ಯೋಜನೆಯಡಿಯಲ್ಲಿ ವೇಗವಾಗಿ ಚಾರ್ಜಿಂಗ್ ಮಾಡುವ ಮೂಲಮಾದರಿಯನ್ನು ಅಭಿವೃದ್ಧಿಪಡಿಸಲು ಪುಣೆಯ ARAI ಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ಅವರು ಹೇಳಿದರು.
ಡಿಸೆಂಬರ್ 2022 ರ ವೇಳೆಗೆ ಇದನ್ನು ಮಾರುಕಟ್ಟೆಗೆ ತರುವ ಗುರಿ ಹೊಂದಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಮೂಲಮಾದರಿಯು ಸಿದ್ಧವಾಗಲಿದೆ ಎಂದು ಪಾಂಡೆ ತಿಳಿಸಿದರು.