ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ನಷ್ಟ ಅನುಭವಿಸುತ್ತಿರುವ ಉದ್ಯಮಗಳು, ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಪರಿಹಾರ ನೀಡುವ ಸಲುವಾಗಿ ಮೀಸಲಿಟ್ಟಿದ್ದ ಕೋಟ್ಯಂತರ ರೂ ನಿಧಿಯಲ್ಲಿ ಕಳವಾಗಿರುವ ಬಗ್ಗೆ ಅಮೆರಿಕ ಗುಪ್ತಚರ ಸಂಸ್ಥೆ ಮಾಹಿತಿ ಬಹಿರಂಗ ಪಡಿಸಿದೆ.
ಕಡಿಮೆ ಎಂದರೂ 7.5 ಲಕ್ಷ ಕೋಟಿ ರೂ. ಕಳವಾಗಿರುವುದಾಗಿ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 3.3 ಟ್ರಿಲಿಯನ್'ಡಾಲರ್ ಪರಿಹಾರ ನಿಧಿಯನ್ನು ಸರ್ಕಾರ ಘೋಷಿಸಿತ್ತು. ನಿರುದ್ಯೋಗ ವಿಮಾ ಕ್ಷೇತ್ರದಲ್ಲೇ ಹೆಚ್ಚಿನ ಗೋಲ್ ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ.
ಪರಿಹಾರ ನಿಧಿ ವಿತರಣೆಯಲ್ಲಿ ಭಾರೀ ಹಗರಣ ನಡೆದಿದ್ದು ಈ ಸಂಬಂಧ 900 ಪ್ರಕರಣಗಳನ್ನು ದಾಖಲಿಸಿಕೊಂಡು ಸಂಸ್ಥೆ ತನಿಖೆ ನಡೆಸುತ್ತಿದೆ. ಅಲ್ಲದೆ ಈಗಾಗಲೇ ಇದೇ ವಿಚಾರವಾಗಿ 100 ಮಂದಿ ಆರೋಪಿಗಳನ್ನು ಬಂಧಿಸಿದೆ.
ಹಗರಣವನ್ನು ತಡೆಯುವುದು ಕಷ್ಟ ಎಂದಿರುವ ಅಧಿಕಾರಿಗಳು, ಆದರೆ ಹಗರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಅವರಿಂದ ಹಣವನ್ನು ವಶಪಡಿಸಿಕೊಳ್ಳುವತ್ತ ತಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದಿದ್ದಾರೆ.