ನವದೆಹಲಿ: ಕೋವಿಡ್ ಎದುರಿಸಲು ಆಸ್ಪತ್ರೆಗಳಲ್ಲಿ ಏಳು ಲಕ್ಷಕ್ಕೂ ಹೆಚ್ಚು ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಶುಕ್ರವಾರ ಹೇಳಿದ್ದಾರೆ.
'ಜಗತ್ತಿನಾದ್ಯಂತ ಕೊರೊನಾ ರೂಪಾಂತರ ತಳಿ ಓಮೈಕ್ರಾನ್‌ನ 9.64 ಲಕ್ಷ ಪ್ರಕರಣಗಳು ಗುರುವಾರ ವರದಿಯಾಗಿವೆ. ಜಗತ್ತು ಕೋವಿಡ್‌ನ ನಾಲ್ಕನೇ ಅಲೆಗೆ ಸಾಕ್ಷಿಯಾಗಿದೆ.
ಭಾರತದಲ್ಲಿ ಸೋಂಕಿತರ ಸಂಖ್ಯೆಯು ಕಡಿಮೆ ಆಗುತ್ತಿದೆ. ಹಾಗಿದ್ದರೂ ಓಮೈಕ್ರಾನ್ ಪ್ರಕರಣಗಳು ನಿಧಾನಗತಿಯಲ್ಲಿ ಏರುತ್ತಿವೆ.
ಶುಕ್ರವಾರ ಬೆಳಿಗ್ಗಿನ ಹೊತ್ತಿಗೆ ದೇಶದಲ್ಲಿ 358 ಪ್ರಕರಣಗಳು ದೃಢಪಟ್ಟಿದ್ದವು. ಮಹಾರಾಷ್ಟ್ರ, ದೆಹಲಿ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿಯೇ ಸುಮಾರು 250 ಪ್ರಕರಣಗಳು ವರದಿಯಾಗಿವೆ.
ಕೋವಿಡ್-19 ಪ್ರಕರಣಗಳು ಕೂಡ ಮುಂಬೈ ಮತ್ತು ದೆಹಲಿಯಲ್ಲಿ ಏರಿಕೆ ಕಂಡಿವೆ. ಮುಂಬೈಯಲ್ಲಿ ಸತತ ಮೂರು ದಿನಗಳಿಂದ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ದೆಹಲಿಯಲ್ಲಿ ಶುಕ್ರವಾರ 180 ಪ್ರಕರಣಗಳು ದೃಢಪಟ್ಟಿವೆ.
ಇದು ಎರಡು ತಿಂಗಳಲ್ಲಿಯೇ ಅತಿ ಹೆಚ್ಚು.
ಆಮ್ಲಜನಕ ಸೌಲಭ್ಯ ಇರುವ 4.94 ಲಕ್ಷ ಹಾಸಿಗೆಗಳು ಸಿದ್ಧವಿವೆ. 1.39 ಲಕ್ಷ ಐಸಿಯು ಹಾಸಿಗೆಗಳಿವೆ. 1.2 ಲಕ್ಷ ಐಸಿಯು ಹಾಸಿಗೆಗಳನ್ನು ಕೇಂದ್ರ ಸರ್ಕಾರವು ಮಂಜೂರು ಮಾಡಿದೆ ಎಂದು ಭೂಷಣ್ ತಿಳಿಸಿದ್ದಾರೆ.
ವೈದ್ಯಕೀಯ ಆಮ್ಲಜನಕ ಸಿದ್ಧಪಡಿಸುವ ಪ್ರತಿ ದಿನದ ಸಾಮರ್ಥ್ಯ 18 ಸಾವಿರ ಟನ್‌ಗೆ ಏರಿದೆ. ಇದು ಎರಡನೇ ಅಲೆಯ ಸಂದರ್ಭದ ಸಾಮರ್ಥ್ಯಕ್ಕಿಂತ ಶೇ 80ರಷ್ಟು ಹೆಚ್ಚು ಎಂದು ಅವರು ಮಾಹಿತಿ ಕೊಟ್ಟಿದ್ದಾರೆ.
ತಿರುಮಲ ಪ್ರವೇಶಕ್ಕೆ ಲಸಿಕೆ ಕಡ್ಡಾಯ:
ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ ಹೋಗುವ ಭಕ್ತರು ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದುಕೊಂಡ ಪ್ರಮಾಣಪತ್ರ ತೋರಿಸುವುದು ಕಡ್ಡಾಯ. ಅದು ಇಲ್ಲದೇ ಇದ್ದರೆ, 48 ಗಂಟೆಗಳ ಮೊದಲು ಪಡೆದುಕೊಂಡ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ತೋರಿಸಬೇಕು ಎಂದು ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಮಾಣಪತ್ರ ಇಲ್ಲದವರನ್ನು ಬೆಟ್ಟದ ಕೆಳಭಾಗದ ತಪಾಸಣಾ ಠಾಣೆ ಅಲಿಪಿರಿಯಿಂದಲೇ ಹಿಂದಕ್ಕೆ ಕಳುಹಿಸಲಾಗುವುದು.