ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಬುಧವಾರ ಪೆಟ್ರೋಲ್ ಮೇಲಿನ ವ್ಯಾಟ್(ಮೌಲ್ಯವರ್ಧಿತ ತೆರಿಗೆ) ಅನ್ನು ಕಡಿತಗೊಳಿಸಿದ್ದು, ಪರಿಣಾಮ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 8 ರೂಪಾಯಿ ಕಡಿಮೆಯಾಗಿದೆ.
ದೆಹಲಿ ಸರ್ಕಾರ ವ್ಯಾಟ್ ಅನ್ನು ಕಡಿಮೆ ಮಾಡುವ ಮೂಲಕ ನಗರದಲ್ಲಿ ಇಂಧನ ಬೆಲೆಯನ್ನು ಲೀಟರ್ ಸುಮಾರು 8 ರೂಪಾಯಿಗಳಷ್ಟು ಕಡಿಮೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸಂಪುಟ ಸಭೆಯಲ್ಲಿ, ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಈಗಿರುವ ಶೇ. 30 ರಿಂದ ಶೇಕಡಾ 19.4ಕ್ಕೆ ಇಳಿಸಲು ನಿರ್ಧರಿಸಲಾಯಿತು. ಇದರಿಂದಾಗಿ ವ್ಯಾಟ್ ಕಡಿತದ ನಂತರ ಪೆಟ್ರೋಲ್ ಬೆಲೆ ಪ್ರಸ್ತುತ ಲೀಟರ್ ಗೆ 103 ರೂ.ನಿಂದ 95 ರೂ.ಗೆ ಇಳಿಯಲಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಪರಿಷ್ಕೃತ ದರ ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.
ಕೇಂದ್ರ ಸರ್ಕಾರ ನವೆಂಬರ್ ಮೊದಲ ವಾರದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಬಕಾರಿ ಸುಂಕದಲ್ಲಿ ಕಡಿತ ಮಾಡಿ ಆದೇಶ ಹೊರಡಿಸಿತ್ತು. ಇದರಿಂದ ಪೆಟ್ರೋಲ್ ದರ 5 ರೂಪಾಯಿ ಹಾಗೂ ಡೀಸೆಲ್ ದರ 10 ರೂಪಾಯಿ ಇಳಿಕೆಯಾಗಿತ್ತು. ಈ ಘೋಷಣೆ ಬೆನ್ನಲ್ಲೇ ದೆಹಲಿ ವಿರೋಧ ಪಕ್ಷ ಬಿಜೆಪಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು 10 ರೂಪಾಯಿ ಕಡಿತಗೊಳಿಸಬೇಕು ಎಂದು ಒತ್ತಾಯಿಸಿತ್ತು.