ಭೋಪಾಲ: ಮಧ್ಯಪ್ರದೇಶದಲ್ಲಿ 80 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಒಂದು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಮತ್ತು ರಾಜ್ಯ ವಿಪತ್ತು ತುರ್ತು ಮೀಸಲು ಪಡೆ (ಎಸ್‌ಡಿಇಆರ್‌ಎಫ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
ಭೋಪಾಲದಿಂದ ಸುಮಾರು 350 ಕಿ.ಮೀ.ದೂರದಲ್ಲಿರುವ ಛತ್ತರ್‌ಪುರ ಜಿಲ್ಲೆಯ ಗೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 3.30ರ ಹೊತ್ತಿಗೆ ಕೊಳವೆ ಬಾವಿಗೆ ಬಿದ್ದ ದಿವ್ಯಾಂಶಿ ಎಂಬ ಮಗುವನ್ನು ಸುಮಾರು 10 ಗಂಟೆ ನಡೆದ ಸತತ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
'ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ಹೊರ ತರಲಾಗಿದೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ' ಎಂದು ಛತ್ತರ್‌ಪುರ ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಜಮೀನಿನಲ್ಲಿ ತಾಯಿ ಕೆಲಸ ಮಾಡುತ್ತಿದ್ದ ವೇಳೆ ಆಟವಾಡಿಕೊಂಡಿದ್ದ ದಿವ್ಯಾಂಶಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು. ಈ ವೇಳೆ ಹುಡುಕಾಡಿದಾಗ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿರುವುದು ತಿಳಿದಿದೆ.
ತಾಯಿಯ ಕಿರುಚಾಟವನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. 80 ಅಡಿ ಆಳದ ಕೊಳವೆ ಬಾವಿಯ ಸುಮಾರು 15 ಅಡಿ ಆಳದಲ್ಲಿ ದಿವ್ಯಾಂಶಿ ಸಿಲುಕಿಕೊಂಡಿರುವುದು ಪೊಲೀಸರ ಗಮನಕ್ಕೆ ಬಂತು. ಮಗುವಿನ ಅಳು ಕೇಳಿಸಿದ ಪೊಲೀಸರು ಆಮ್ಲಜನಕದ ಬೆಂಬಲವನ್ನು ಒದಗಿಸಿದರು.
ಬಳಿಕ ಗ್ವಾಲಿಯರ್‌ನಿಂದ ಬಂದ ಎಸ್‌ಡಿಇಆರ್‌ಎಫ್ ತಂಡವು ಕಾರ್ಯಾಚರಣೆ ಕೈಗೊಂಡಿತು. ಕೊಳವೆ ಬಾವಿಗೆ ಸಿಸಿಟಿವಿ ಆಳವಡಿಸಿ ಮಗುವಿನ ಚಲನೆಯನ್ನು ಗಮನ ವಹಿಸಲಾಯಿತು.
ಜೆ.ಸಿ.ಬಿ ಯಂತ್ರಗಳನ್ನು ಬಳಸಿ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ತೋಡಿ ಬಾಲಕಿಯನ್ನು ರಕ್ಷಿಸಲಾಯಿತು. ಮಗುವನ್ನು ಜೀವಂತವಾಗಿ ಹೊರ ತರಲು ಸಾಧ್ಯವಾಗಿರುವುದು ತಾಯಿ ಹಾಗೂ ರಕ್ಷಣಾ ತಂಡದ ಅಪಾರ ಸಂತಸಕ್ಕೆ ಕಾರಣವಾಗಿದೆ.