ನವದೆಹಲಿ: ಕಳೆದ ಏಳು ವರ್ಷಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಭಾರತದ ನಾಗರಿಕರು ತಮ್ಮ ಪೌರತ್ವ ತ್ಯಜಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದರು.
ಕಳೆದ ಏಳು ವರ್ಷಗಳಲ್ಲಿ ಸೆಪ್ಟೆಂಬರ್ 30, 2021ರವರೆಗೆ ಒಟ್ಟು 8,81,254 ಮಂದಿ ಭಾರತೀಯರು ಪೌರತ್ವ ತ್ಯಜಿಸಿದ್ದು, ಈ ಸಂಖ್ಯೆ 2019ರಲ್ಲಿ ಹೆಚ್ಚಿದೆ ಎಂದು ಹೇಳಿದ್ದಾರೆ.
2015ರಲ್ಲಿ ಒಟ್ಟು 1,31,489 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದರು. ತದನಂತರ 2016ರಲ್ಲಿ 1,41,603ಕ್ಕೆ ಏರಿತು. 2017ರಲ್ಲಿ 1,33,049, 2018ರಲ್ಲಿ, ಈ ಸಂಖ್ಯೆ 1,34,561ಕ್ಕೆ ಏರಿತ್ತು. 2019ರಲ್ಲಿ ಅವರ ಸಂಖ್ಯೆ 1,44,017ಕ್ಕೆ ಏರಿತು ಮತ್ತು 2020ರಲ್ಲಿ ಅದು 85,242ಕ್ಕೆ ಇಳಿಯಿತು. 2021ರಲ್ಲಿ ಮತ್ತೆ 1,11,287 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದರು ಎಂಬ ಅಂಕಿ ಅಂಶವನ್ನು ನಿತ್ಯಾನಂದ್ ಅವರು ತಿಳಿಸಿದ್ದಾರೆ.
ಈ ಮಾಹಿತಿ ಆಧರಿಸಿ ಲೋಕಸಭೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕ ಕೋಠಾ ಪ್ರಭಾಕರ ರೆಡ್ಡಿ ಅರ್ಜಿದಾರರಿಗೆ ದಾಖಲೆಗಳನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲು ನಿಬಂಧನೆಗಳನ್ನು ಹಾಕಲಾಗಿದೆಯೇ, ತ್ಯಜಿಸಲು 60 ದಿನಗಳ ಗರಿಷ್ಠ ಮಿತಿ ಇದೆಯೇ”? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನಿತ್ಯಾನಂದ್ “1955 ರ ಪೌರತ್ವ ಕಾಯ್ದೆಯ ಸೆಕ್ಷನ್ 8 ರ ನಿಬಂಧನೆಗಳ ಅಡಿಯಲ್ಲಿ ಭಾರತದ ಪೌರತ್ವವನ್ನು ತ್ಯಜಿಸಬಹುದು. ಭಾರತೀಯ ಪೌರತ್ವವನ್ನು ತ್ಯಜಿಸಲು ಆನ್‍ಲೈನ್ ಪೋರ್ಟಲ್ ಅನ್ನು ಆಗಸ್ಟ್ 2021ರಲ್ಲಿ ಸಕ್ರಿಯಗೊಳಿಸಲಾಗಿದೆ. ನಿರಾಕರಣೆಯ ಅರ್ಜಿಗಳ ಅಂತಿಮ ಪ್ರಕ್ರಿಯೆಯು ಆನ್‍ಲೈನ್ ಪೌರತ್ವ ಮಾಡ್ಯೂಲ್‍ನಲ್ಲಿ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.