ನವದೆಹಲಿ: ಸಂವಿಧಾನದ 14ನೇ ವಿಧಿಯು ನೀಡುವ ಸಮಾನತೆಯ ಹಕ್ಕು ಯಾವುದೇ ಆಯ್ಕೆ ಇಲ್ಲದ ಅಥವಾ ಅರ್ಥಪೂರ್ಣವಾದ ಯಾವುದೇ ಆಯ್ಕೆ ಇಲ್ಲದ ವ್ಯಕ್ತಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯಾವುದೇ ಆಯ್ಕೆ ಇಲ್ಲದ ವ್ಯಕ್ತಿಗೂ ಮೂಲಭೂತ ಹಕ್ಕು ನಿರಾಕರಣೆ ಮಾಡುವಂತಿಲ್ಲ.
ಅಂಗವೈಕಲ್ಯ ಪಿಂಚಣಿಯನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ ಪಣಿರಾಮ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. ಸ್ವಯಂ ಸೇವಾ ಸೈನ್ಯಕ್ಕೆ (ಟೆರಿಟೋರಿಯಲ್ ಆರ್ಮಿ) ಮರು ಸೇರ್ಪಡೆ ಆಗುವ ಹೊತ್ತಿಗೆ ಸಹಿ ಮಾಡಿ ಕೊಟ್ಟ ಕರಾರಿನ ಆಧಾರದಲ್ಲಿ ಪಣಿರಾಮ್ ಅವರಿಗೆ ಪಿಂಚಣಿ ನಿರಾಕರಿಸಲಾಗಿತ್ತು. ಅವರು ಸೇನೆಯಲ್ಲಿ 25 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಸ್ವಯಂ ಸೇವಾ ಸೈನ್ಯ ಸೇರಿದ್ದರು. 10 ದಿನಗಳ ರಜೆ ಮುಗಿಸಿ 2009ರ ಏಪ್ರಿಲ್ 24ರಂದು ಕರ್ತವ್ಯಕ್ಕೆ ಹಾಜರಾಗಲು ಹೋಗುತ್ತಿದ್ದಾಗ ಅಪಘಾತವಾಗಿತ್ತು. ಪರಿಣಾಮವಾಗಿ ಅವರ ಕಾಲು ಕತ್ತರಿಸಬೇಕಾಗಿ ಬಂದಿತ್ತು.
ಹೆಚ್ಚುವರಿ ಪಿಂಚಣಿಗೆ ಬೇಡಿಕೆ ಇರಿಸುವುದಿಲ್ಲ ಎಂದು ಬರೆದಿದ್ದ ಕರಾರಿಗೆ ಪಣಿರಾಮ್ ಸಹಿ ಮಾಡಿದ್ದಾರೆ. ಹಾಗಾಗಿ, ಪಿಂಚಣಿ ನೀಡಲಾಗದು ಎಂಬ ಕೇಂದ್ರದ ವಾದವನ್ನು ಪೀಠವು ತಿರಸ್ಕರಿಸಿತು.
'ಪ್ರಬಲವಾದ ಕೇಂದ್ರ ಸರ್ಕಾರ ಮತ್ತು ದೇಶಕ್ಕಾಗಿ ಹೋರಾಡಿದ ಸಾಮಾನ್ಯ ಸೈನಿಕರನ್ನು ಸಮಾನ ಎಂದು ಪರಿಗಣಿಸಲು ಸಾಧ್ಯವೇ' ಎಂದು ಪೀಠವು ಪ್ರಶ್ನಿಸಿದೆ.
ಯುದ್ಧವಲ್ಲದ ಸಂದರ್ಭದಲ್ಲಿ ಗಾಯಗೊಂಡ ಸಿಬ್ಬಂದಿಯು ಶೇ 20 ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೆ ಒಳಗಾಗಿದ್ದರೆ ಅಂಥವರು ಅಂಗವೈಕಲ್ಯ ಪಿಂಚಣಿ ಪಡೆಯಲು ಅರ್ಹರು ಎಂದು ನಿಯಮ ಹೇಳುತ್ತದೆ. ಅರ್ಜಿದಾರರಿಗೆ ಪಿಂಚಣಿ ನಿರಾಕರಿಸಲು ಕಾರಣವೇನು ಎಂಬುದು ಅರ್ಥವಾಗುತ್ತಿಲ್ಲ. ಸೇನಾ ಕರ್ತವ್ಯದಿಂದಾಗಿಯೇ ಅವರು ಗಾಯಗೊಂಡಿದ್ದಾರೆಯೇ ಹೊರತು ನಿರ್ಲಕ್ಷ್ಯದಿಂದ ಅಲ್ಲ ಎಂದು ವೈದ್ಯಕೀಯ ಮಂಡಳಿ ಕೂಡ ಹೇಳಿದೆ ಎಂದು ಪೀಠವು ಹೇಳಿದೆ.