ನವದೆಹಲಿ: ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್(AWWA)ದ ಅಧ್ಯಕ್ಷರಾಗಿದ್ದಾರೆ.ಅವರು ಸೈನಿಕರ ಪತ್ನಿ, ಮಕ್ಕಳ ಕಲ್ಯಾಣಕ್ಕಾಗಿ ತಮ್ಮನ್ನು ಮೀಸಲಿಟ್ಟಿದ್ದಾರೆ. ಈ AWWA ಭಾರತದಲ್ಲಿರುವ ಅತಿದೊಡ್ಡ ಎನ್‌ಜಿಒಗಳಲ್ಲಿ ಒಂದಾಗಿದೆ. ಮಧುಲಿಕಾ ದೇಶಕ್ಕಾಗಿ ಪ್ರಾಣತೊರೆದವರ ಪತ್ನಿಯರು ಹಾಗೂ ಮಕ್ಕಳಿಗೆ ಸಹಾಯ ಮಾಡಲು ಎನ್‌ಜಿಒ ಆರಂಭಿಸಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ದಿವ್ಯಾಂಗ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಸೇನೆಯಿಂದ ನಿವೃತ್ತಿ ಹೊಂದಿದವರು ಹಾಗೂ ಸೇನೆಯಲ್ಲಿದ್ದಾಗ ಕೆಲವು ಘಟನೆಗಳಲ್ಲಿ ತಮ್ಮ ಅಂಗಾಂಗವನ್ನೇ ಕಳೆದುಕೊಂಡಿರುವವರಿಗೂ ಸಹಾಯ ಮಾಡುವ ಎನ್‌ಜಿಒ ಇದಾಗಿದೆ. ಸೇನಾ ಕಾಲೇಜು, ಶಾಲೆಗಳಿಗೆ ಎನ್‌ಜಿಒ ಮೂಲಕ ಸಹಾಯ ಮಾಡುತ್ತಿದ್ದಾರೆ.
ಮಧುಲಿಕಾ ಅವರು ಸೈನಿಕರ ಪತ್ನಿಯರನ್ನು ಸಬಲೀಕರಣಗೊಳಿಸುವ ಪ್ರಯತ್ನದಲ್ಲಿದ್ದಾರೆ. ಬ್ಯೂಟಿಷಿಯನ್ ಕೋರ್ಸ್ ಜತೆಗೆ, ಟೈಲರಿಂಗ್ , ಬ್ಯಾಗ್ ಮೇಕಿಂಗ್ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ.
ಕೇಕ್, ಚಾಕೊಲೇಟ್ ತಯಾರಿಕೆ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಿರುತ್ತಾರೆ. ಮಧುಲಿಕಾ ರಾವತ್ ಅವರು ದೆಹಲಿಯಲ್ಲಿ ಅಧ್ಯಯನ ಮಾಡಿದ್ದಾರೆ, ದೆಹಲಿ ವಿಶ್ವ ವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ.
AWWA ಹೊರತಾಗಿಯೂ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ವಿಶೇಷವಾಗಿ ಕ್ಯಾನ್ಸರ್ ಪೀಡಿತರ ಜತೆ ಬೆನ್ನೆಲುಬಾಗಿ ನಿಂತು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಮಧುಲಿಕಾ ರಾವತ್ ಅವರು ಪತಿ ಬಿಪಿನ್ ರಾವತ್ ಅವರೊಂದಿಗೆ ಊಟಿಯಲ್ಲಿರುವ ಡಿಫೆನ್ಸ್ ಸರ್ವೀಸ್ ಕಾಲೇಜಿಗೆ ತೆರಳುತ್ತಿರುವಾಗ ಹೆಲಿಕಾಪ್ಟರ್ ಪತನ ಸಂಭವಿಸಿದೆ. ಮಧುಲಿಕಾ ಅವರು ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.