, ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಓಮಿಕ್ರಾನ್ ರೂಪಾಂತರ ವೇಗವಾಗಿ ಹರಡುತ್ತಿದೆ. ಹೊಸ ರೂಪಾಂತರಿ ಓಮಿಕ್ರಾನ್ ಜನರಲ್ಲಿ ಕೆಲವು ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅದಾಗ್ಯೂ, ಕೊವಿಡ್-19 ಲಸಿಕೆ ಈಗಲೂ ಬಹುಪಾಲು ರೋಗಾಣುಗಳಿಂದ ಪ್ರತಿರಕ್ಷಣೆ ಒದಗಿಸುತ್ತದೆ ಎಂದು ದಕ್ಷಿಣ ಆಫ್ರಿಕಾದ ಇತ್ತೀಚಿನ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಕಳೆದ ವಾರವಷ್ಟೇ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಸೋಂಕಿತ ಪ್ರಕರಣ ವರದಿ ಆಯಿತು. ಹೊಸ ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಪ್ರಯಾಣ ನಿರ್ಬಂಧ ಸೇರಿದಂತೆ ಇತರೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಯಿತು.
ದಕ್ಷಿಣ ಆಫ್ರಿಕಾದ ಒಟ್ಟು 9 ಪ್ರದೇಶಗಳ ಪೈಕಿ ಐದು ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಪತ್ತೆಯಾಗಿದೆ. ತದನಂತರದಲ್ಲಿ ಇಡೀ ದೇಶಕ್ಕೆ ಓಮಿಕ್ರಾನ್ ರೂಪಾಂತರ ಸೋಂಕು ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಬುಧವಾರ ಸರ್ಕಾರದದ ಮೂಲಗಳು ತಿಳಿಸಿವೆ.
ಓಮಿಕ್ರಾನ್ ಸೋಂಕಿನ ಹರಡುವಿಕೆ ವೇಗ ಹೆಚ್ಚಳ
ದಕ್ಷಿಣ ಆಫ್ರಿಕಾದಲ್ಲಿ ಒಂದು ದಿನದಲ್ಲಿ ಪತ್ತೆಯಾಗುವ ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 8,561ಕ್ಕೆ ಏರಿಕೆಯಾಗಿದೆ. ಆದರೆ ಈ ಸೋಂಕಿತರಲ್ಲಿ ಎಷ್ಟು ಜನರಿಗೆ ಓಮಿಕ್ರಾನ್ ರೂಪಾಂತರ ತಗುಲಿದೆ ಎಂಬುದು ಖಾತ್ರಿಯಾಗಿಲ್ಲ. ಈ ಸಂಬಂಧ ಎಲ್ಲ ಸೋಂಕಿತರ ಮಾದರಿಯನ್ನು ಸಂಗ್ರಹಿಸಿ ಜೀನೋಮ್ ಸೀಕ್ವೆನ್ಸಿಂಗ್ ನಡೆಸಲಾಗುತ್ತಿದೆ. ಆದರೆ, ದೇಶದಲ್ಲಿ ಓಮಿಕ್ರಾನ್ ರೂಪಾಂತರ ಶರವೇಗದಲ್ಲಿ ಹರಡುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರ ಪ್ರಭಾವ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್ (NICD) ಪ್ರಕಾರ, ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ 249 ಕೊವಿಡ್-19 ಸೋಂಕಿತರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲಾಯಿತು. ಈ ವೇಳೆ ಶೇ.74ರಷ್ಟು ಜನರಲ್ಲಿ ಓಮಿಕ್ರಾನ್ ರೂಪಾಂತರ ವೈರಸ್ ಪತ್ತೆಯಾಗಿದೆ. ರಾಷ್ಟ್ರೀಯ ಜೀನೋಮ್ ಕಣ್ಗಾವಲು ನೆಟ್‌ವರ್ಕ್ ನೀಡಿದ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ದಕ್ಷಿಣ ಆಫ್ರಿಕಾವು ಪ್ರತಿ ವಾರ ಸಂಗ್ರಹಿಸಿದ ಒಟ್ಟು ಮಾದರಿಗಳ ಪೈಕಿ ಕೆಲವು ಪ್ರಮಾಣದ ಮಾದರಿಯನ್ನು ಮಾತ್ರ ಜೀನೋಮ್ ಸೀಕ್ವೆನ್ಸಿಂಗ್ ನಡೆಸುತ್ತದೆ. ಎನ್ಐಸಿಡಿ ದೇಶದಲ್ಲಿ ಒಟ್ಟು ಎಷ್ಟು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಸಂಪೂರ್ಣ ಲಸಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ತಳಿಯು ಸಾಮಾನ್ಯವಾಗಿ ದೇಹದ ಕೆಲವು ಪ್ರತಿರಕ್ಷಣೆಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ರೋಗದ ತೀವ್ರತೆಯನ್ನು ಹೆಚ್ಚಿಸುವ, ಸಾವಿನ ಅಪಾಯವನ್ನು ತಗ್ಗಿಸುವ ಸಾಮರ್ಥ್ಯ ಲಸಿಕೆಗಳಿಗೆ ಇರುತ್ತದೆ. ಲಸಿಕೆಯು ಒದಗಿಸುವ ಎಲ್ಲಾ ಪ್ರತಿರಕ್ಷಣೆಯನ್ನು ಮೀರಿ ಪ್ರಭಾವ ಬೀರುವ ಸಾಮರ್ಥ್ಯವು ಓಮಿಕ್ರಾನ್ ರೂಪಾಂತರ ತಳಿಗೆ ಇರುವುದಿಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ತಿಳಿಸಿರುವ ಬಗ್ಗೆ ಕಣ್ಗಾವಲು ನೆಟ್‌ವರ್ಕ್‌ನ ಇತ್ತೀಚಿನ ವರದಿ ಹೇಳಿದೆ.
ಮೊದಲ ಮಾದರಿ ಸಂಗ್ರಹಸಿದ ದಕ್ಷಿಣ ಆಫ್ರಿಕಾದ ನಗರ?
ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾ ಇರುವ ದಕ್ಷಿಣ ಆಫ್ರಿಕಾದ ಅತ್ಯಂತ ಜನನಿಬಿಡ ಪ್ರಾಂತ್ಯವಾದ ಗೌಟೆಂಗ್‌ನಲ್ಲಿ ನವೆಂಬರ್ 8ರಂದು ಓಮಿಕ್ರಾನ್ ರೂಪಾಂತರವನ್ನು ಪತ್ತೆಹಚ್ಚಿದ ಆರಂಭಿಕ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅಂದಿನಿಂದ ಹೊಸ ರೂಪಾಂತರ ಸೋಂಕು, ಈಸ್ಟರ್ನ್ ಕೇಪ್, ಕ್ವಾಝುಲು ನಟಾಲ್, ಎಂಪುಮಲಂಗಾ ಮತ್ತು ವೆಸ್ಟರ್ನ್ ಕೇಪ್‌ನಲ್ಲಿ ಪತ್ತೆಯಾಗಿದೆ.
ಇದಕ್ಕೂ ಮೊದಲು 36 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಸಂಘಟಕರು ಯುವಜನರಿಗಾಗಿ ಆಯೋಜಿಸುತ್ತಿದ್ದ ಸಂಗೀತ ಉತ್ಸವವನ್ನು ನಿಲ್ಲಿಸಿದರು. ದಕ್ಷಿಣ ಆಫ್ರಿಕಾದ ಪೂರ್ವ ಕರಾವಳಿಯ ಡರ್ಬನ್‌ನ ಉತ್ತರದಲ್ಲಿರುವ ಬಲ್ಲಿಟೊ ಪಟ್ಟಣದಲ್ಲಿ ಮಂಗಳವಾರ ಬ್ಯಾಲಿಟೊ ರೇಜ್ ಸಂಗೀತ ಉತ್ಸವ ಪ್ರಾರಂಭವಾಯಿತು. ಈ ಉತ್ಸವದ ಮೊದಲ ಎಂಟು ಗಂಟೆಗಳಲ್ಲಿ 940 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದ್ದು, 32 ಅತಿಥಿಗಳು ಮತ್ತು ನಾಲ್ವರು ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ 36 ಮಂದಿಗೆ ಒಮಿಕ್ರಾನ್ ಸೋಂಕು ತಗುಲಿದೆಯೇ ಅಥವಾ ಬೇರೆ ರೂಪಾಂತರ ಅಂಟಿಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ರೂಪಾಂತರ ವೈರಸ್, ಕೊವಿಡ್-19 ಮೂರನೇ ಅಲೆಗೆ ಮುಖ್ಯ ಕಾರಣವಾಗಿತ್ತು. ಜುಲೈ ತಿಂಗಳ ಆರಂಭದಲ್ಲಿ ದೇಶದಲ್ಲಿ ಪ್ರತಿನಿತ್ಯ 26,000ಕ್ಕಿಂತ ಹೆಚ್ಚು ಕೊರೊನಾವೈರಸ್ ಪ್ರಕರಣಗಳು ವರದಿಯಾಗುತ್ತಿದ್ದವು. ಸಾಂಕ್ರಾಮಿಕ ಪಿಡುಗು ಆರಂಭವಾದಾಗಿನಿಂದ ಈವರೆಗೆ ದಕ್ಷಿಣ ಆಫ್ರಿಕಾದಲ್ಲಿ 30 ಲಕ್ಷಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 89,000ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ.