ನವದೆಹಲಿ: ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್ ಗ್ರಾಮಗಳಲ್ಲಿ ನಾಗರಿಕರನ್ನು ಭದ್ರತಾ ಪಡೆಗಳ ಸಿಬ್ಬಂದಿ ಗುಂಡಿಕ್ಕಿ ಹತ್ಯೆಗೈದಿರುವ ಘಟನೆಯ ಬಗ್ಗೆ ಕೇಂದ್ರ ಸರ್ಕಾರವು ಸೋಮವಾರ ಸಂಸತ್ತಿನಲ್ಲಿ ವಿಷಾದ ವ್ಯಕ್ತಪಡಿಸಿದೆ.
ನವದೆಹಲಿ: ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್ ಗ್ರಾಮಗಳಲ್ಲಿ ನಾಗರಿಕರನ್ನು ಭದ್ರತಾ ಪಡೆಗಳ ಸಿಬ್ಬಂದಿ ಗುಂಡಿಕ್ಕಿ ಹತ್ಯೆಗೈದಿರುವ ಘಟನೆಯ ಬಗ್ಗೆ ಕೇಂದ್ರ ಸರ್ಕಾರವು ಸೋಮವಾರ ಸಂಸತ್ತಿನಲ್ಲಿ ವಿಷಾದ ವ್ಯಕ್ತಪಡಿಸಿದೆ.
ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಶೇಷ ತನಿಖಾ ತಂಡವು (ಎಸ್‌ಐಟಿ) ತನಿಖೆಯನ್ನು ನಡೆಸಲಿದ್ದು, ಒಂದು ತಿಂಗಳೊಳಗೆ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದ್ದಾರೆ.
ಅಲ್ಲದೆ ಎಲ್ಲ ಏಜೆನ್ಸಿಗಳು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಖಚಿತಪಡಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಉಗ್ರರು ಅಡಗಿ ಕುಳಿತಿರುವ ಪ್ರದೇಶದಲ್ಲಿ ದಾಳಿ ನಡೆಸಲು ಯೋಧರು ಸಜ್ಜುಗೊಂಡಿದ್ದರು. ಈ ಹಾದಿಯಾಗಿ ಬಂದ ವಾಹನಕ್ಕೆ ನಿಲ್ಲುವಂತೆ ಸೂಚಿಸಲಾಯಿತು. ಆದರೆ ಸೂಚನೆಯನ್ನು ಧಿಕ್ಕರಿಸಿ ಪರಾರಿಯಾಗಲು ಯತ್ನಿಸಿದಾಗ ಭದ್ರತಾ ಪಡೆಯು ಗುಂಡಿನ ದಾಳಿ ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ.
ವಾಹನದಲ್ಲಿದ್ದ ಎಂಟು ಮಂದಿಯ ಪೈಕಿ ಆರು ಮಂದಿ ಸಾವನ್ನಪ್ಪಿದ್ದಾರೆ. ತಪ್ಪಾದ ಗ್ರಹಿಕೆಯಿಂದ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದರು. ಬಳಿಕ ನಾಗರಿಕರು ನಡೆಸಿದ ದಾಳಿಯಲ್ಲಿ ಒಬ್ಬ ಸೈನಿಕ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ಆತ್ಮರಕ್ಷಣೆ ಹಾಗೂ ಗುಂಪನ್ನು ಚದುರಿಸಲು ಯೋಧರು ಗುಂಡು ಹಾರಿಸಬೇಕಾಯಿತು. ಇದರಿಂದ ಏಳು ನಾಗರಿಕರು ಮೃತಪಟ್ಟರು ಎಂದು ಅಮಿತ್ ಶಾ ವಿವರಣೆ ನೀಡಿದರು.
ಗೃಹ ಸಚಿವರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಡಿಎಂಕೆ, ಎಸ್‌ಪಿ, ಬಿಎಸ್‌ಪಿ, ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳು ಸದನದಿಂದ ಹೊರ ನಡೆದವು.