ಹೈದರಾಬಾದ್ : ಅತ್ಯಾಧುನಿಕ ತಂತ್ರಜ್ಞಾನದ ಮೂಲಕ 'ಉಸಿರಾಡಿಸುವ ಶ್ವಾಸಕೋಶ ಕಸಿ 'ಯನ್ನು ನಡೆಸುವ ಅಮೆರಿಕ ಮತ್ತು ಕೆನಡಾದಂತಹ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಿದೆ. ಹೊಸ ಶ್ವಾಸಕೋಶಗಳಿಗಾಗಿ ಕಾಯುತ್ತಿರುವವರ ಪಟ್ಟಿಯು ಬೆಳೆಯುತ್ತಲೇ ಇದ್ದು,ಕೊರೋನ ವೈರಸ್ ಶ್ವಾಸಕೋಶ ವೈಫಲ್ಯದ ಅಪಾಯಗಳನ್ನು ಹೆಚ್ಚಿಸಿರುವುದರಿಂದ ಹೈದರಾಬಾದ್ ನ ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕಿಮ್ಸ್)ನ ಈ ಸಾಧನೆ ಮಹತ್ವಪೂರ್ಣವಾಗಿದೆ.
ಈ ಅತ್ಯಾಧುನಿಕ ತಂತ್ರಜ್ಞಾನವು ದಾನಿಯಿಂದ ಅಂಗವನ್ನು ಪಡೆದುಕೊಳ್ಳುವುದರ ಮತ್ತು ಅದನ್ನು ಕಸಿ ಮಾಡುವ ಪ್ರಕ್ರಿಯೆಗಳ ನಡುವಿನ ಲಭ್ಯ ಸಮಯವನ್ನು ಹೆಚ್ಚಿಸಲು ನೆರವಾಗುತ್ತದೆ. ಅದು ಸೋಂಕನ್ನು ನಿವಾರಿಸುವ ಮತ್ತು ದಾನ ಮಾಡಿದ ಶ್ವಾಸಕೋಶಗಳು ವ್ಯರ್ಥವಾಗುವುದನ್ನು ಕಡಿಮೆಗೊಳಿಸುವ ಮೂಲಕ ಅಂಗವನ್ನು ಹೆಚ್ಚು ಸುಲಭವಾಗಿ ಸ್ವೀಕರಿಸಲು ರೋಗಿಯ ಶರೀರದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದೇಶದಲ್ಲಿಯೇ ಪ್ರಪ್ರಥಮವಾಗಿ ಇಂತಹ ಕಸಿಯನ್ನುಕಿಮ್ಸ್‌ನಲ್ಲಿ ನಡೆಸಲಾಗಿದೆ.
ದಾನ ಮಾಡಿದ ಶ್ವಾಸಕೋಶವು ಸೋಂಕು ಮತ್ತು ಆಂತರಿಕ ಅಂಗಗಳ ಕುಸಿತದಿಂದಾಗಿ ಬಳಸಲು ಸಾಧ್ಯವಾಗದಾಗ ಅದು ವ್ಯರ್ಥಗೊಳ್ಳುತ್ತದೆ. ವಾಸ್ತವದಲ್ಲಿ ಈ ಕಾರಣದಿಂದಾಗಿ ದಾನದ ಮೂಲಕ ಲಭ್ಯ ಶ್ವಾಸಕೋಶಗಳ ಪೈಕಿ ಅರ್ಧಕ್ಕೂ ಹೆಚ್ಚಿನವುಗಳನ್ನು ಕಸಿಯ ಅಗತ್ಯವಿರುವ ರೋಗಿಗಳಿಗಾಗಿ ಬಳಸಲು ಸಾಧ್ಯವಾಗುವುದಿಲ್ಲ ಎಂದು ಕಿಮ್ಸ್ ನ ಪ್ರೋಗ್ರಾಂ ಡೈರೆಕ್ಟರ್ ಡಾ.ಸಂದೀಪ್ ಅತ್ತಾವರ ತಿಳಿಸಿದರು.
ದಾನ ಮಾಡಿದ ಶ್ವಾಸಕೋಶವನ್ನು ಗಾಳಿಯಾಡದಂತೆ ಭದ್ರಗೊಳಿಸಲಾಗಿರುವ 'ಆರ್ಗನ್ ರಿಕಂಡಿಷನಿಂಗ್ ಬಾಕ್ಸ್' ಎಂಬ ಯಂತ್ರದಲ್ಲಿರಿಸಿ ಸೋಂಕನ್ನು ಹೊರಹಾಕುವ ಪ್ರತಿಜೀವಕಗಳು ಮತ್ತು ಇತರ ಅಗತ್ಯ ದ್ರವಗಳನ್ನು ಒಳಗೊಂಡ ಪೋಷಕಾಂಶದ ದ್ರಾವಣದಿಂದ ಚಿಕಿತ್ಸೆ ನೀಡಿದಾಗ ಅದು ಉಸಿರಾಟವನ್ನು ಆರಂಭಿಸುತ್ತದೆ. ನಂತರ ಅದನ್ನು ವೆಂಟಿಲೇಟರ್‌ಗಳ ಮೂಲಕ ಕೃತಕವಾಗಿ ಉಸಿರಾಡಿಸುವಂತೆ ಮಾಡಲಾಗುತ್ತದೆ ಮತ್ತು ಇದು ಕುಸಿದಿರುವ ಭಾಗಗಳನ್ನು ಉತ್ತೇಜಿಸುತ್ತದೆ. ಬ್ರಾಂಕೊಸ್ಕೋಪಿ ಮೂಲಕ ವಾಯುಮಾರ್ಗಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಶ್ವಾಸಕೋಶದ ಇನ್ನಷ್ಟು ಮೌಲ್ಯಮಾಪನ ಕ್ಕಾಗಿ ಹಾಗೂ ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಏಕಕಾಲದಲ್ಲಿ ಹಲವಾರು ಪರೀಕ್ಷೆಗಳನ್ನು ನಡೆಸಬಹುದು. ಇಡೀ ಪ್ರಕ್ರಿಯೆಯ ಮೇಲೆ ವಿವಿಧ ತಜ್ಞರನ್ನೊಳಗೊಂಡ ವೈದ್ಯರ ತಂಡವು ನಿಗಾಯಿರಿಸುತ್ತದೆ ಮತ್ತು ಶ್ವಾಸಕೋಶವು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ಗಮನಿಸುತ್ತಿರುತ್ತದೆ.
ಅಂತಿಮವಾಗಿ ಕಸಿಯನ್ನು ನಡೆಸಿದ ಬಳಿಕ ರೋಗಿಯು ತನ್ನ ಶರೀರವು ಸುಲಭವಾಗಿ ಸ್ವೀಕರಿಸುವ ಮತ್ತು ದೀರ್ಘಾವಧಿ ಬಾಳಿಕೆ ಬರುವ ಉತ್ತಮ ಸ್ಥಿತಿಯಲ್ಲಿರುವ ಶ್ವಾಸಕೋಶವನ್ನು ಪಡೆಯುತ್ತಾನೆ.
ಈ ಪ್ರಕ್ರಿಯೆಯು ಬಳಸಬಹುದಾದ ಅಂಗಗಳ ಸಂಖ್ಯೆಯನ್ನು ಶೇ,30ರಷ್ಟು ಹೆಚ್ಚಿಸುತ್ತದೆ ಎಂದು ಡಾ.ಅತ್ತಾವರ ತಿಳಿಸಿದರು. 50 ವೈದ್ಯರನ್ನೊಳಗೊಂಡಿರುವ ಅವರ ವೈದ್ಯರ ತಂಡವು ಈ ತಂತ್ರಜ್ಞಾನವನ್ನು ಪರಿಪೂರ್ಣಗೊಳಿಸಲು ಕಳೆದ ಆರು ತಿಂಗಳುಗಳಿಂದಲೂ ಶ್ರಮಿಸುತ್ತಿದೆ.