ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್ ಆಫ್ ಚೇರ್ಮನ್ ಆನಂದ್ ಮಹೀಂದ್ರಾ ಅವರು ತಮ್ಮ ಕಣ್ಣಿಗೆ ಬಿದ್ದಂತಹ ವಿಶೇಷತೆಗಳನ್ನು ಆಗಾಗ ಪರಿಚಯಿಸುತ್ತಿರುತ್ತಾರೆ. ಅದರಂತೆ ಈ ಬಾರಿಯು ಒಂದು ವಿಶೇಷ ವಾಹನವನ್ನು ಪರಿಚಯಿಸಿರುವ ಅವರು ವಾಹನ ತಯಾರಿಸಿದವನಿಗೆ ಒಂದು ಆಫರ್ ನೀಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ.
ಮಹಾರಾಷ್ಟ್ರದ ದತ್ತಾತ್ರೆಯ ಲೋಹರ್ ಎಂಬುವರು ಹಾಳಾದ ಲೋಹದ ತುಣುಕುಗಳು ಅಥವಾ ಗುಜರಿ ವಸ್ತುಗಳನ್ನು ಬಳಸಿಕೊಂಡು ನಾಲ್ಕು ಚಕ್ರದ ವಾಹನವನ್ನು ಸಂಶೋಧಿಸಿದ್ದಾರೆ. ಹಿಸ್ಟರಿಕೆನೋ ಹೆಸರಿನ ಯೂಟ್ಯೂಬ್ ಚಾನೆಲ್ ಪ್ರಕಾರ ದತ್ತಾತ್ರೆಯ ಲೋಹಾರ್ ಅವರು ಕಡಿಮೆ ಶಿಕ್ಷಣವನ್ನು ಹೊಂದಿದ್ದರೂ ಕೂಡ ಹಾಳಾದ ಲೋಹದ ತುಣುಕುಗಳನ್ನು ತೆಗೆದುಕೊಂಡು ತಮ್ಮ ಮಗನ ಆಸೆಯನ್ನು ಈಡೇರಿಸಲು ವಾಹನ ಸಂಶೋಧನೆ ಮಾಡಿದ್ದಾರೆ. ಈ ವಿಶಿಷ್ಟ ಸಂಶೋಧನೆಯನ್ನು ನೋಡಿ ಪ್ರಭಾವಿತಗೊಂಡ ಆನಂದ್ ಮಹೀಂದ್ರಾ ಅವರು ತಕ್ಷಣ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಇದು ಸ್ಪಷ್ಟವಾಗಿ ಯಾವುದೇ ನಿಬಂಧನೆಗಳನ್ನು ಪೂರೈಸುವುದಿಲ್ಲ ಆದರೆ, ನಮ್ಮ ಜನರ ಜಾಣ್ಮೆ ಮತ್ತು ಸಾಮರ್ಥ್ಯಗಳನ್ನು ಮೆಚ್ಚುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನು 45 ಸೆಕೆಂಡಿನ ವಿಡಿಯೋದಲ್ಲಿ ಮಹಾರಾಷ್ಟ್ರದ ದೇವರಾಷ್ಟ್ರೇ ಗ್ರಾಮದ ಕಮ್ಮಾರ ಆಗಿರುವ ದತ್ತಾತ್ರೆಯ ಲೋಹರ್ ಅವರು ಹೇಗೆ ವಾಹನ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಕೇವಲ 60 ಸಾವಿರ ರೂಪಾಯಿಯಲ್ಲಿ ವಾಹನವನ್ನು ತಯಾರಿಸಲಾಗಿದೆ. ಕೇವಲ ದ್ವಿಚಕ್ರ ವಾಹನಗಳಲ್ಲಿ ಇರುವಂತಹ ಕಿಕ್ ಸ್ಟಾರ್ಟ್ ಮೆಕ್ಯಾನಿಸಂ ವ್ಯವಸ್ಥೆಯು ಕೂಡ ಈ ವಾಹನದಲ್ಲಿದೆ. ಇದು ಹಳೆಯ ಮತ್ತು ಕೈಬಿಟ್ಟಂತಹ ಕಾರಿನ ಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ.
ಮತ್ತೊಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ಆತನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಬದಲು ವಾಹನವು ಸರ್ಕಾರದ ಕೆಲವು ನಿಯಮಗಳನ್ನು ಅನುಸರಿಸಿಲ್ಲ ಎಂದು ಕಾರಣ ನೀಡಿ ಸ್ಥಳೀಯ ಅಧಿಕಾರಿಗಳು ಅದನ್ನು ರಸ್ತೆಗಳಲ್ಲಿ ಓಡಿಸದಂತೆ ತಡೆಯುತ್ತಾರೆ ಎಂದಿರುವ ಅವರು ವೈಯಕ್ತಿಕವಾಗಿ ದತ್ತಾತ್ರೆಯ ಅವರಿಗೆ ಬೊಲೆರೋ ಕಾರು ವಿನಿಮಯದ ಆಫರ್ ನೀಡಿದ್ದಾರೆ. ಅಲ್ಲದೆ, ಆತನ ಆವಿಷ್ಕಾರ ಇತರರಿಗೆ ಮಾದರಿಯಾಗಲು ಮಹೀಂದ್ರ ರೀಸರ್ಚ್ ವ್ಯಾಲಿಯಲ್ಲಿ ಪ್ರದರ್ಶಿಸುವುದಾಗಿ ಭರವಸೆ ನೀಡಿದ್ದಾರೆ.
ಸದ್ಯ ದತ್ತಾತ್ರೆಯ ಆವಿಷ್ಕಾರದ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.