ತಿರುವನಂತಪುರ: ಕಣ್ಣೂರು ವಿ.ವಿ.ಉಪಕುಲಪತಿ ನೇಮಕಕ್ಕೆ ಅಡ್ಡಿಪಡಿಸಿರುವ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ರಾಜೀನಾಮೆಗೆ ಎಬಿವಿಪಿ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಎಬಿವಿಪಿ ಸೆಕ್ರೆಟರಿಯೇಟ್‍ಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಿ.ಟಿ.ಶ್ರೀಹರಿ ಮಾತನಾಡಿ, ವಿಶ್ವವಿದ್ಯಾನಿಲಯಗಳಲ್ಲಿನ ರಾಜಕೀಯ ಮತ್ತು ಸಂಬಂಧಿಗಳ ನೇಮಕಾತಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಪತ್ರ ಅತ್ಯಂತ ಗಂಭೀರವಾಗಿದೆ.
ವಿಶ್ವವಿದ್ಯಾನಿಲಯಗಳಲ್ಲಿನ ರಾಜಕೀಯ ಹಸ್ತಕ್ಷೇಪದ ಕುರಿತು ಕೇರಳ ರಾಜ್ಯಪಾಲರು ಮುಖ್ಯಮಂತ್ರಿಗೆ ಬರೆದ ಪತ್ರ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಸಂವಿಧಾನದ ಮುಖ್ಯಸ್ಥರಾಗಿರುವ ರಾಜ್ಯಪಾಲರೂ ಕೂಡ ಸಂವಿಧಾನ ಬದ್ಧವಾಗಿ ನಡೆದುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಸಿಪಿಎಂ ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕೀಯಗೊಳಿಸಿದೆ. ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವರೇ ರಾಜ್ಯಪಾಲರ ಮೇಲೆ ಒತ್ತಡ ಹೇರಿರುವುದು ಸ್ಪಷ್ಟವಾಗಿರುವುದರಿಂದ ಪತ್ರದ ಆಧಾರದಲ್ಲಿ ಸಚಿವೆ ಬಿಂದು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕುಲಪತಿಗಳೇ ಮರು ನೇಮಕ ಮಾಡಿದ್ದು, ಸರ್ಕಾರದ ಹಸ್ತಕ್ಷೇಪ ಇಲ್ಲ ಎಂದು ಮುಖ್ಯಮಂತ್ರಿ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಿದರು. ಪಿಣರಾಯಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲ ವಿಶ್ವವಿದ್ಯಾಲಯಗಳ ನೇಮಕಾತಿಗಳನ್ನು ಪರಿಶೀಲಿಸಬೇಕು. ಶೈಕ್ಷಣಿಕ ಅರ್ಹತೆಗಳನ್ನು ಗಾಳಿಗೆ ತೂರಿ ಬಹುಪಾಲು ನೇಮಕಾತಿಗಳನ್ನು ಅರ್ಹತೆಗೆ ಧಿಕ್ಕರಿಸಲಾಗಿದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಂಕಿತ ಹಾಕಲು ಮುಂದಾಗಿರುವ ಸರ್ಕಾರದ ಕ್ರಮ ಶಾಸಕಾಂಗ ನೀಡಿದ ಕುಲಪತಿ ಸ್ಥಾನಕ್ಕೇ ಅವಮಾನ ಮಾಡಿದಂತೆ ಆಗಿದೆ. ರಾಜ್ಯಪಾಲರ ಪತ್ರದ ಹಿನ್ನೆಲೆಯಲ್ಲಿ ಉಪಕುಲಪತಿ ನೇಮಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿರುವ ಉನ್ನತ ಶಿಕ್ಷಣ ಸಚಿವರಿಗೆ ಒಂದು ಕ್ಷಣವೂ ಹುದ್ದೆಯಲ್ಲಿ ಉಳಿಯುವ ನೈತಿಕ ಹಕ್ಕಿಲ್ಲ. ಜನರ ದಾರಿ ತಪ್ಪಿಸುತ್ತಿರುವ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದೂ ಶ್ರೀಹರಿ ಹೇಳಿದ್ದಾರೆ.