ಚೆನ್ನೈ: ತಮಿಳುನಾಡಿನ ತಿರುನಲ್ವೇಲಿ ಬಳಿಯ ಶಾಫ್ಟರ್ ಹೈ ಸ್ಕೂಲಿನ ವಿಶ್ರಾಂತಿ ಕೊಠಡಿಯ ಗೋಡೆ ಕುಸಿದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಮೃತ ವಿದ್ಯಾರ್ಥಿಗಳನ್ನು ಸುಧೀಶ್(6ನೇ ತರಗತಿ), ವಿಶ್ವರಂಜನ್(8ನೇ ತರಗತಿ) ಮತ್ತು ಅನ್ಬಳಗನ್ (9ನೇ ತರಗತಿ) ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ವಿರಾಮದ ವೇಳೆ ವಿದ್ಯಾರ್ಥಿಗಳು ಶೌಚಾಲಯಕ್ಕೆ ಧಾವಿಸಿದ ವೇಳೆ ಈ ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ವಿ ವಿಷ್ಣು ಅವರ ಕಚೇರಿ ತಿಳಿಸಿದೆ. ಶೌಚಾಲಯದ ಮುಂಭಾಗದ ಗೋಡೆಯು ವಿಶ್ರಾಂತಿ ಕೊಠಡಿಯೊಳಗಿದ್ದ ವಿದ್ಯಾರ್ಥಿಗಳ ಮೇಲೆ ಕುಸಿದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಗೋಡೆಗೆ ಅಡಿಪಾಯ ಇರಲಿಲ್ಲ ಮತ್ತು ಇತ್ತೀಚಿನ ಮಳೆಗೆ ಗೋಡೆಯು ದುರ್ಬಲಗೊಂಡಿರಬಹುದು ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.
ತನಿಖೆಗೆ ಆದೇಶಿಸಲಾಗಿದ್ದು, ತನಿಖಾ ವರದಿ ಆಧರಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿರುನಲ್ವೇಲಿ ನಗರ ಪೊಲೀಸ್ ಆಯುಕ್ತ ಎನ್ ಕೆ ಸೆಂತಾಮರೈ ಕಣ್ಣನ್ ಹೇಳಿದ್ದಾರೆ.
ಸಾವಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಸಂತ್ರಸ್ತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಾಗೂ ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.