ನವದೆಹಲಿ: ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಜಗತ್ತಿನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಮಧ್ಯೆಯೇ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ ಗೆ ಅನುಮೋದನೆ ನೀಡುವಂತೆ ಭಾರತದ ಡ್ರಗ್ ರೆಗ್ಯುಲೇಟರ್ ಮನವಿ ಮಾಡಿದೆ.
ದೇಶದಲ್ಲಿ ಕೋವಿಡ್ ಲಸಿಕೆಯು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದು, ಹೊಸ ಕೊರೋನಾ ವೈರಸ್ ರೂಪಾಂತರಿ ಹೊರಹೊಮ್ಮುವಿಕೆಯಿಂದಾಗಿ ಬೂಸ್ಟರ್ ಡೋಸ್ ಬೇಡಿಕೆಯನ್ನು ಉಲ್ಲೇಖಿಸಿ ಅನುಮತಿ ಕೇಳಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾರತದ ಔಷಧ ನಿಯಂತ್ರಕ ಜನರಲ್ (ಡಿಸಿಜಿಐ) ಗೆ ಸಲ್ಲಿಸಿದ ಅರ್ಜಿಯಲ್ಲಿ, ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ ಐಐ) ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು, ಯುಕೆಯ ಔಷಧಗಳು ಮತ್ತು ಆರೋಗ್ಯ ಆರೈಕೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಈಗಾಗಲೇ ಆಸ್ಟ್ರಾಜೆನೆಕಾ ಚಾಡೋಕ್ಸ್1 ಎನ್ ಸಿಒವಿ-19 ಲಸಿಕೆಯ ಬೂಸ್ಟರ್ ಡೋಸ್ ಅನ್ನು ಅನುಮೋದಿಸಿದೆ ಎಂದು ಅವರು ತಿಳಿಸಿದ್ದಾರೆ.
"ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದ ನಮ್ಮ ದೇಶದ ಜನರು ಮತ್ತು ಇತರ ದೇಶಗಳ ನಾಗರಿಕರು ಬೂಸ್ಟರ್ ಡೋಸ್‌ಗಾಗಿ ನಮ್ಮ ಸಂಸ್ಥೆಗೆ ನಿರಂತರವಾಗಿ ವಿನಂತಿಸುತ್ತಿದ್ದಾರೆ" ಎಂದು ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಜಗತ್ತು ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದ, ಹಲವು ದೇಶಗಳು ಕೋವಿಡ್-19 ಲಸಿಕೆಗಳ ಬೂಸ್ಟರ್ ಡೋಸ್ ಅನ್ನು ನೀಡಲು ಪ್ರಾರಂಭಿಸಿವೆ ಎಂದು ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.