ನವದೆಹಲಿ:ಚೀನಾ ಅರುಣಾಚಲ ಪ್ರದೇಶದ 15 ಸ್ಥಳಗಳು ತನ್ನ ಭೂಪ್ರದೇಶವೆಂದು ಹೇಳಿಕೊಂಡು ತನ್ನ ಕುತ್ಸಿತ ಬುದ್ಧಿಯನ್ನು ಮತ್ತೆ ಪ್ರದರ್ಶಿಸಿರುವ ಬೆನ್ನಿಗೇ ದಿಲ್ಲಿಯಲ್ಲಿರುವ ಅದರ ರಾಯಭಾರ ಕಚೇರಿಯು ದೇಶಭ್ರಷ್ಟ ಟಿಬೆಟ್ ಸಂಸತ್ತು ಆಯೋಜಿಸಿದ್ದ ಸತ್ಕಾರ ಕೂಟದಲ್ಲಿ ಭಾಗಿಯಾಗಿದ್ದಕ್ಕೆ ಹಲವಾರು ಭಾರತೀಯ ಸಂಸದರಿಗೆ ಬರೆದಿರುವ ಪತ್ರವು ತೀಕ್ಷ್ಣ ರಾಜಕೀಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ಕಳೆದ ವಾರ ದಿಲ್ಲಿಯಲ್ಲಿ ನಡೆದಿದ್ದ ಸತ್ಕಾರ ಕೂಟದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಕನಿಷ್ಠ ಆರು ಸಂಸದರು ಪಾಲ್ಗೊಂಡಿದ್ದರು.
'ಟಿಬೆಟ್ ಗಾಗಿ ಸರ್ವಪಕ್ಷ ಸಂಸದೀಯ ವೇದಿಕೆ 'ಯ ಕೆಲವು ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ಚೀನಾ ರಾಯಭಾರ ಕಚೇರಿಯು, ಸತ್ಕಾರ ಕೂಟದಲ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದೆಯಲ್ಲದೆ, ಟಿಬೆಟನ್ ಶಕ್ತಿಗಳನ್ನು ಬೆಂಬಲಿಸುವುದರಿಂದ ದೂರವಿರುವಂತೆ ಅವರಿಗೆ ಸೂಚಿಸಿದೆ.
ಭಾರತೀಯ ಸಂಸದರಿಗೆ ಪತ್ರ ಬರೆಯಲು ಚೀನಾ ರಾಯಭಾರ ಕಚೇರಿಗೆ ಯಾವುದೇ ಅಧಿಕಾರವಿಲ್ಲ ಎಂದು ವೇದಿಕೆಯ ಸಂಚಾಲಕ ಸುಜಿತ್ ಕುಮಾರ್ ಹೇಳಿದರು.
ಈ ಬಗ್ಗೆ ಸರಕಾರವು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.
ಸಾಮಾನ್ಯವಾಗಿ ಭಾರತವು ಯಾವುದೇ ವಿದೇಶಿ ರಾಯಭಾರ ಕಚೇರಿಯು ದೇಶದ ಆಂತರಿಕ ವಿಷಯಗಳ ಕುರಿತು ಹೇಳಿಕೆ ನೀಡುವುದನ್ನು ಅನುಮೋದಿಸುವುದಿಲ್ಲ.
ಪೂರ್ವ ಲಡಾಖ್ ನಲ್ಲಿ ಗಡಿ ಬಿಕ್ಕಟ್ಟಿನ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ನಡುವೆಯೇ ಚೀನಾ ರಾಯಭಾರ ಕಚೇರಿಯು ಈ ಪತ್ರವನ್ನು ಬರೆದಿದೆ.
ತನಗೆ ಪತ್ರ ಬಂದಿಲ್ಲ, ಆದರೆ ಹಲವಾರು ಇತರ ಸಂಸದರು ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಬಿಜೆಡಿ ಸಂಸದ ಕುಮಾರ್, ಪತ್ರವು ತಿರಸ್ಕಾರಕ್ಕೆ ಅರ್ಹವಾಗಿದೆ. ರಾಯಭಾರ ಕಚೇರಿಯು ಪತ್ರ ಬರೆದಿರುವುದು ಇದೇ ಮೊದಲಲ್ಲ, ಹಲವಾರು ಸಲ ಅದು ತನಗೆ ಪತ್ರ ಬರೆದಿದೆ. ಭಾರತೀಯ ಸಂಸದರಿಗೆ ಪತ್ರವನ್ನು ಬರೆಯಲು ಅದಕ್ಕೆ ಯಾವುದೇ ಅಧಿಕಾರ ಸ್ಥಾನವಿಲ್ಲ. ಅದಕ್ಕೇನಾದರೂ ಸಮಸ್ಯೆಯಿದ್ದರೆ ಅದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಬರೆಯಬಹುದಿತ್ತು. ಅದು ಶಿಷ್ಟಾಚಾರವನ್ನು ಉಲ್ಲಂಘಿಸಿದೆ ಎಂದು ಹೇಳಿದರು.
ದೇಶಭ್ರಷ್ಟ ಟಿಬೆಟನ್ ಸರಕಾರದೊಂದಿಗೆ ಭಾರತೀಯ ಸಂಸದರ ಭೇಟಿ ರಾಜಕೀಯ ಚಟುವಟಿಕೆಯಾಗಿರಲಿಲ್ಲ ಎಂದು ಒತ್ತಿ ಹೇಳಿದ ಅವರು,'ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಉತ್ತೇಜಿಸುವುದು ಅದರ ಉದ್ದೇಶವಾಗಿತ್ತು. ವೇದಿಕೆಯು ಟಿಬೆಟನ್ ಕಲೆ, ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದ ಸಂರಕ್ಷಣೆಗಾಗಿ ಪ್ರತಿಪಾದಿಸುತ್ತದೆ. ನಾವು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಯಸುವುದಿಲ್ಲ,ಆದರೆ ಜನರ ನಡುವೆ ಸಂವಹನವನ್ನು ಹೆಚ್ಚಿಸಲು ಬಯಸಿದ್ದೇವೆ ' ಎಂದು ಹೇಳಿದರು.
ಓರ್ವ ಭಾರತೀಯ ಪ್ರಜೆಯಾಗಿ ತಾನು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು, ಇತರ ಸಂಸದರಿಗೂ ಈ ಹಕ್ಕು ಇದೆ ಎಂದ ಕುಮಾರ್, ಹಿಮಾಚಲ ಪ್ರದೇಶದ ಧರ್ಮಶಾಲಾಕ್ಕೆ ತೆರಳಿ ದಲಾಯಿ ಲಾಮಾರನ್ನು ಭೇಟಿಯಾಗಲು ವೇದಿಕೆಯ ಸದಸ್ಯರು ಉದ್ದೇಶಿಸಿದ್ದಾರೆ ಎಂದು ತಿಳಿಸಿದರು.
ಕೆಲವು ಇಂಗ್ಲಿಷ್ ವೃತ್ತಪತ್ರಿಕೆಗಳಲ್ಲಿಯ ವರದಿಯು ತನ್ನ ಗಮನವನ್ನು ಸೆಳೆದಿದೆ. ತನಗೆ ಯಾವುದೇ ಪತ್ರವು ಬಂದಿಲ್ಲ. ಇಂತಹ ನಿರ್ಲಜ್ಜ ಪತ್ರಗಳಿಗೆ ಪ್ರತಿಕ್ರಿಯಿಸುವ ಮೂಲಕ ತನ್ನನ್ನು ಕೀಳುಮಟ್ಟಕ್ಕೆ ಇಳಿಸಿಕೊಳ್ಳಲು ತಾನು ಬಯಸುವುದಿಲ್ಲ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಪತ್ರವನ್ನು ಬರೆದಿದ್ದರೆ ಬಹುಶಃ ತಾನು ಉತ್ತರಿಸುತ್ತಿದ್ದೆ ಎಂದು ವೇದಿಕೆಯ ಸದಸ್ಯ ಕಾಂಗ್ರೆಸ್ ನ ಮನೀಷ್ ತಿವಾರಿ ಹೇಳಿದರು.
ಈ ನಡುವೆ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ತಾನು ಮರುನಾಮಕರಣ ಮಾಡಿರುವುದನ್ನು ಶುಕ್ರವಾರ ಸಮರ್ಥಿಸಿಕೊಂಡಿರುವ ಚೀನಾ, ಟಿಬೆಟ್ ನ ದಕ್ಷಿಣ ಪ್ರದೇಶವಾಗಿರುವ ಅದು ತನ್ನ ಭೂಪ್ರದೇಶದ ಅಂತರ್ಗತ ಭಾಗವಾಗಿದೆ ಎಂದು ಹೇಳಿದೆ.
ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿರುವುದನ್ನು ಗುರುವಾರ ಬಲವಾಗಿ ತಿರಸ್ಕರಿಸಿರುವ ಭಾರತವು,ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಭಾಗವಾಗಿತ್ತು ಮತ್ತು ಅವಿಭಾಜ್ಯ ಭಾಗವಾಗಿರಲಿದೆ,'ಆವಿಷ್ಕೃತ ' ಹೆಸರುಗಳನ್ನು ಇರಿಸುವುದರಿಂದ ಸತ್ಯವು ಬದಲಾಗುವುದಿಲ್ಲ ಎಂದು ಹೇಳಿದೆ.
'ಇಂತಹುದನ್ನು ನಾವು ನೋಡಿದ್ದೇವೆ. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣದ ಚೀನಾದ ಪ್ರಯತ್ನ ಇದೇ ಮೊದಲೇನಲ್ಲ. 2017 ಎಪ್ರಿಲ್‌ನಲ್ಲಿಯೂ ಅದು ಇಂತಹ ಪ್ರಯತ್ನವನ್ನು ಮಾಡಿತ್ತು ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರವಿಂದ ಬಾಗ್ಚಿ ತಿಳಿಸಿದರು.