ನವದೆಹಲಿ: 'ಅಪರಾಧ ಎಸಗಿರಬಹುದಾದ ಆರೋಪಿಯ ಇತರ ಸಹಚರರ ವಿರುದ್ಧ ಚಾರ್ಜ್‌ಶೀಟ್ ದಾಖಲಾಗಿಲ್ಲ ಎನ್ನುವ ಕಾರಣಕ್ಕಾಗಿ ಆರೋಪಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲಾಗದು' ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಬಿ.ವಿ. ನಾಗರತ್ನಾ ಅವರನ್ನೊಳಗೊಂಡ ನ್ಯಾಯಪೀಠವು, ಕರ್ನಾಟಕ ಹೈಕೋರ್ಟ್‌ನ ಆದೇಶದ ವಿರುದ್ಧ ಸುವರ್ಣ ಸಹಕಾರಿ ಬ್ಯಾಂಕ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ, 'ಆರೋಪಿಯ ಇತರ ಸಹಚರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿಲ್ಲ ಎಂದು ಕಂಡುಬಂದರೆ, ಸೆಕ್ಷನ್ 319 ಸಿಆರ್‌ಪಿಸಿ ಅಡಿಯಲ್ಲಿ ಅಧಿಕಾರ ಚಲಾಯಿಸುವ ಮೂಲಕ ನ್ಯಾಯಾಲಯವು ಅವರನ್ನು ಆರೋಪಿಗಳನ್ನಾಗಿ ಪರಿಗಣಿಸಬಹುದು' ಎಂದು ತಿಳಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B (ಕ್ರಿಮಿನಲ್ ಪಿತೂರಿ), 408 (ಗುಮಾಸ್ತರಿಂದ ನಂಬಿಕೆಯ ಉಲ್ಲಂಘನೆ), 409 (ಸಾರ್ವಜನಿಕ ಸೇವಕರಿಂದ ನಂಬಿಕೆಯ ಉಲ್ಲಂಘನೆ) 420 (ವಂಚನೆ) ಮತ್ತು 149 ಅಡಿಯಲ್ಲಿ ಸಹ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿಲ್ಲದ ಕಾರಣ, ಮುಖ್ಯ ಆರೋಪಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು.
ದೂರುದಾರ ಬ್ಯಾಂಕ್ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಪ್ರಕರಣದ ಆರೋಪಿ ಸಂಖ್ಯೆ 1ರ ವಿರುದ್ಧ ಚಾರ್ಜ್‌ಶೀಟ್ ಕೂಡಾ ಸಲ್ಲಿಕೆಯಾಗಿದೆ.
ಮುಖ್ಯ ಆರೋಪಿಯ ಸಹಚರರಾಗಿದ್ದ ಆರೋಪಿ ಸಂಖ್ಯೆ 2 ಮತ್ತು ಆರೋಪಿ ಸಂಖ್ಯೆ 3 ಇವರ ವಿರುದ್ಧ ಪೊಲೀಸರ ವರದಿಯಲ್ಲಿ ಚಾರ್ಜ್‌ಶೀಟ್ ದಾಖಲಾಗಿರಲಿಲ್ಲ. ಇದನ್ನು ಗಮನಿಸಿ ಕರ್ನಾಟಕ ಹೈಕೋರ್ಟ್ ಆರೋಪಿ ಸಂಖ್ಯೆ 1-ಇವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಿ ಆದೇಶ ನೀಡಿತ್ತು.
'ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ಆರೋಪಿಯ ವಿರುದ್ಧದ ಆರೋಪಗಳ ಮೇಲೆ ಗಮನ ಹರಿಸಿಲ್ಲ' ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.