ನವದೆಹಲಿ: ಅಫ್ಗಾನಿಸ್ತಾನದ ಜನರಿಗೆ ತತ್‌ಕ್ಷಣವೇ ಮಾನವೀಯ ನೆರವು ಒದಗಿಸಬೇಕಿದೆ ಎಂದು ಭಾರತ ಮತ್ತು ಐದು ಮಧ್ಯ ಏಷ್ಯಾ ದೇಶಗಳು ಭಾನುವಾರ ಕರೆ ನೀಡಿವೆ.
ಅಫ್ಗಾನಿಸ್ತಾನ ಪ್ರದೇಶವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಆಶ್ರಯ, ತರಬೇತಿ ತಾಣವಾಗಿ ಬಳಸಬಾರದು.
ಭಾರತ- ಮಧ್ಯ ಏಷ್ಯಾ ದೇಶಗಳೊಂದಿಗೆ ದೆಹಲಿಯಲ್ಲಿ ನಡೆದ ಮೂರನೇ ಸಂವಾದದಲ್ಲಿ ಪಾಲ್ಗೊಂಡಿದ್ದ ಕಜಕಿಸ್ತಾನ, ಕಿರ್ಗಿಜ್ ಗಣರಾಜ್ಯ, ತಜಕಿಸ್ತಾನ, ತುರ್ಕ್‌ಮೆನಿಸ್ತಾನ, ಉಜ್ಬೇಕಿಸ್ತಾನಗಳ ವಿದೇಶಾಂಗ ಸಚಿವರು ಶಾಂತಿ, ಸುರಕ್ಷಿತ ಮತ್ತು ಸ್ಥಿರವಾದ ಅಫ್ಗಾನಿಸ್ತಾನಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.
ಯುದ್ಧದಿಂದ ಹಾನಿಗೊಳಗಾಗಿರುವ ದೇಶದ ಸಾರ್ವಭೌಮತೆ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಅಗತ್ಯವನ್ನು ಈ ರಾಷ್ಟ್ರಗಳು ಒತ್ತಿ ಹೇಳಿದವು.
ಅಫ್ಗಾನಿಸ್ತಾನದ ಪರಿಸ್ಥಿತಿಯ ಬಗ್ಗೆ ನಿಕಟ ಸಮಾಲೋಚನೆಗಳನ್ನು ಮುಂದುವರಿಸಲು ಎಲ್ಲ ಸಚಿವರು ಇದೇ ವೇಳೆ ಸಹಮತ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, 'ನಾವೆಲ್ಲರೂ ಅಫ್ಗಾನಿಸ್ತಾನದೊಂದಿಗೆ ಆಳವಾದ ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳನ್ನು ಹಂಚಿಕೊಂಡಿದ್ದೇವೆ. ಆ ದೇಶಕ್ಕೆ ಸಂಬಂಧಿಸಿದಂತೆ ನಮ್ಮೆಲ್ಲರ ಕಾಳಜಿ ಮತ್ತು ಉದ್ದೇಶಗಳು ಒಂದೇ ಆಗಿವೆ. ಹಾಗಾಗಿ ಅಲ್ಲಿನ ಜನರಿಗೆ ತುರ್ತಾಗಿ ನೆರವು ನೀಡಲು ನಾವು ದಾರಿಗಳನ್ನು ಹುಡುಕಬೇಕಿದೆ' ಎಂದರು.