ನವದೆಹಲಿ: ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಿಸುವ ಉದ್ದೇಶವಿಲ್ಲ ಎಂದು ಸರ್ಕಾರ ಹೇಳಿದೆ.
ಆದಾಯ ತೆರಿಗೆ ರಿಟರ್ನ್ಸ್ ಸರಾಗವಾಗಿ ಸಲ್ಲಿಕೆಯಾಗುತ್ತಿದ್ದು, ಇಂದು ಕೊನೆಗೊಳ್ಳುವ ಐಟಿ ರಿಟರ್ನ್ಸ್ ಗಡುವನ್ನು ವಿಸ್ತರಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ.
ತೆರಿಗೆ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯವರೆಗೆ 5.62 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಇಂದು ಕೇವಲ 20 ಲಕ್ಷ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ತರುಣ್ ಬಜಾಜ್ ವಿವರಿಸಿದ್ದಾರೆ.
ಏತನ್ಮಧ್ಯೆ, 2021-22 ಮೌಲ್ಯಮಾಪನ ವರ್ಷದ ತೆರಿಗೆ ಪಾವತಿಯು ಈ ವರ್ಷ ಜುಲೈ 31 ರಂದು ಕೊನೆಗೊಂಡಿತ್ತು. ಆದರೆ, ಐಟಿ ಪೋರ್ಟಲ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಸರ್ಕಾರ ಅದನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಸಮಸ್ಯೆಗಳ ಕುರಿತು ಬಳಕೆದಾರರು ಟ್ವೀಟ್ ಮಾಡುತ್ತಿದ್ದಾರೆ. ಡಿಸೆಂಬರ್ 31 ರ ಗಡುವು ಸಾಕಾಗುವುದಿಲ್ಲ ಎಂದು ಕೆಲವರು ಐಟಿ ಪೋರ್ಟಲ್ ಸಮಸ್ಯೆಗಳ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.