ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಗೋತ್ರ ಜನತಾ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಬೇಡಿಕೆ ಈಡೇರಿಸುವ ಬಗ್ಗೆ ಜಿಲ್ಲಾಡಳಿತದಿಂದ ಸ್ಪಷ್ಟ ಭರವಸೆ ಲಭಿಸದ ಹಿನ್ನೆಲೆಯಲ್ಲಿ ಮಧ್ಯಾಹ್ನ ವರೆಗೆ ಆಯೋಜಿಸಲಾಗಿದ್ದ ಧರಣಿಯನ್ನು ಸಂಜೆ ವರೆಗೂ ವಿಸ್ತರಿಸಲಾಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಅವರು ಸಂಘಟನೆ ಪ್ರತಿನಿಧಿಗಳ ಜತೆ ನಡೆಸಿದ ಚರ್ಚೆ ನಂತರ ಧರಣಿ ಕೈಬಿಡಲು ತೀರ್ಮಾನಿಸಿದರು.
ಎಸ್‍ಸಿ-ಎಸ್‍ಟಿ , ಟಿಎಸ್‍ಪಿ ಕಾನೂನು ಜಾರಿಗೊಳಿಸಬೇಕು, ಎಲ್ಲ ಬುಡಕಟ್ಟು ಸಮುದಾಯಕೃಷಿಭೂಮಿ ವಿತರಣೆಗೆ ಕ್ರಮ ಕೈಗೊಳ್ಳಬೇಕು, ವಿವಾಹ ಧನಸಹಾಯದ ಉಳಿದ ಕಂತನ್ನು ಶೀಘ್ರ ವಿತರಿಸಬೇಕು, ವಾಸಯೋಗ್ಯವಲ್ಲದ ಪರಿಶಿಷ್ಟ ಜಾತಿಯ ಮನೆಗಳಿಗೆ ಹತ್ತು ಲಕ್ಷ ರೂ. ಧನಸಹಾಯ ಮಂಜೂರುಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು. ಸಂಘಟನೆ ರಾಜ್ಯ ಸಮಿತಿ ಕನ್ವೀನರ್ ಸಂತೋಷ್ ಪಾಲತ್ತುಪಾಡನ್ ಸಮಾರಂಭ ಉದ್ಘಾಟಿಸಿದರು. ಸಂಘಟನೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.