ದೇಶದಲ್ಲಿ ಆರೋಗ್ಯ ಸ್ಥಿತಿಗತಿ ಉತ್ತಮವಾಗಿಲ್ಲ ಎಂಬುದನ್ನು ಸಮೀಕ್ಷೆಯ ವರದಿಯಲ್ಲಿರುವ ಕೆಲವು ಪ್ರಮುಖ ಅಂಶಗಳು ತೋರಿಸುತ್ತವೆ. ಆರೋಗ್ಯ ಇಲಾಖೆಯು ಎಚ್ಚೆತ್ತು ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಜರುಗಿಸಬೇಕು
ಮಕ್ಕಳನ್ನು ಪಡೆಯುವ ಒಟ್ಟು ಫಲವಂತಿಕೆ ದರವು (ಟೋಟಲ್ ಫರ್ಟಿಲಿಟಿ ರೇಟ್- ಟಿಎಫ್‌ಆರ್) ದೇಶದಲ್ಲಿ 2.2ರಿಂದ 2ಕ್ಕೆ ಕುಸಿದಿದೆ. ಇದು, ಜನಸಂಖ್ಯಾ ಸ್ಫೋಟದ ತಡೆಯ ಸೂಚಕವಾಗಿದೆ.
ಎನ್‌ಎಫ್‌ಎಚ್‌ಎಸ್-5ರ ಮೊದಲ ಹಂತದ ವರದಿ 2020ರ ಡಿಸೆಂಬರ್‌ನಲ್ಲಿಯೇ ಬಿಡುಗಡೆ ಆಗಿತ್ತು. ಆ ಹಂತದಲ್ಲಿ ಸಮೀಕ್ಷೆಗೆ ಒಳಗಾಗಿದ್ದ ಕರ್ನಾಟಕದಲ್ಲಿ ಟಿಎಫ್‌ಆರ್ 1.7ಕ್ಕೆ ಕುಸಿದಿದೆ. 'ದೇಶದಾದ್ಯಂತ ಟಿಎಫ್‌ಆರ್ ಕುಸಿತಕ್ಕೆ ಗರ್ಭನಿರೋಧಕಗಳ ಬಳಕೆ ಪ್ರಮಾಣ ಹೆಚ್ಚಿರುವುದೇ ಪ್ರಮುಖ ಕಾರಣ. ಗರ್ಭನಿರೋಧಕಗಳನ್ನು ಬಳಕೆ ಮಾಡುವವರ ಪ್ರಮಾಣ ಕಳೆದ ನಾಲ್ಕು ವರ್ಷಗಳಲ್ಲಿ ಶೇ 54ರಿಂದ ಶೇ 67ಕ್ಕೆ ಹೆಚ್ಚಿದೆ' ಎಂದೂ ಸಮೀಕ್ಷೆ ಹೇಳಿದೆ. ಆದರೆ, ತಜ್ಞರು ಗುರುತಿಸಿರುವ ಕಾರಣಗಳು ಬೇರೆ ಇವೆ. ದಿನದಿಂದ ದಿನಕ್ಕೆ ಒತ್ತಡವನ್ನು ಹೆಚ್ಚಿಸುತ್ತಿರುವ ನಗರ ಜೀವನ, ತುಂಬಾ ವಿಳಂಬವಾಗಿ ನಡೆಯುವ ಮದುವೆ, ಬದಲಾದ ಜೀವನಶೈಲಿ, ಮಕ್ಕಳನ್ನು ಪಡೆಯಲು ದಂಪತಿಗಳಲ್ಲಿ ಹೆಚ್ಚುತ್ತಿರುವ ನಿರಾಸಕ್ತಿ, ತೀವ್ರಗತಿಯಲ್ಲಿ ಏರುತ್ತಿರುವ ಮಾಲಿನ್ಯದ ಪ್ರಮಾಣವು ಫಲವಂತಿಕೆ ದರ ಕುಸಿಯಲು ಕಾರಣಗಳು ಎಂದು ತಜ್ಞರು ಹೇಳುತ್ತಾರೆ. ಸರ್ಕಾರ-ಸಮಾಜ ಎರಡೂ ತುಂಬಾ ಗಂಭೀರವಾಗಿ ಯೋಚಿಸಬೇಕಾದ ಸಂಗತಿಗಳು ಇವು.
ಎನ್‌ಎಫ್‌ಎಚ್‌ಎಸ್‌ನ ವರದಿ ಕುರಿತ ಚರ್ಚೆಯನ್ನು ಫಲವಂತಿಕೆ ದರದ ಕುಸಿತಕ್ಕೆ ಮಾತ್ರ ಸೀಮಿತ ಗೊಳಿಸಬೇಕಿಲ್ಲ. ಕೌಟುಂಬಿಕ ಹಿಂಸೆ ತಡೆಯಲು ಎಷ್ಟೆಲ್ಲ ಕಾಯ್ದೆಗಳನ್ನು ರೂಪಿಸಿದರೂ ವಿವಾಹಿತ ಮಹಿಳೆಯರ ಮೇಲಿನ ಹಿಂಸೆಯ ಪ್ರಮಾಣವು ಶೇ 31.2ರಿಂದ ಶೇ 29.3ಕ್ಕೆ ಅಲ್ಪ ಕುಸಿತ ಕಂಡಿದೆ. ಶೇ 3.1ರಷ್ಟು ಗರ್ಭಿಣಿಯರೂ ಹಿಂಸೆಗೆ ಒಳಗಾಗಿದ್ದಾರೆ. ಹದಿನೆಂಟರ ಹರೆಯದ ಶೇ 1.5ರಷ್ಟು ಯುವತಿಯರು ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾರೆ. ಮಕ್ಕಳಲ್ಲಿನ ಅಪೌಷ್ಟಿಕತೆ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಕೂಡ ಹೆಚ್ಚಿನ ಪ್ರಗತಿ ಸಾಧಿಸಲಾಗಿಲ್ಲ. ಮಕ್ಕಳಲ್ಲಿನ ಅಪೌಷ್ಟಿಕತೆಯು ಶೇ 38ರಿಂದ ಶೇ 36ಕ್ಕೆ ಕುಸಿತವಾಗಿದೆ ಅಷ್ಟೆ. ಶೇ 50ರಷ್ಟು ಮಹಿಳೆಯರನ್ನು ರಕ್ತಹೀನತೆ ಈಗಲೂ ಕಾಡುತ್ತಿದೆ. ಕಬ್ಬಿಣಾಂಶದ ಮಾತ್ರೆಗಳನ್ನು ವಿತರಿಸಿದರೂ ರಕ್ತಹೀನತೆ ಸಮಸ್ಯೆ ಹಾಗೇ ಉಳಿದಿದ್ದೇಕೆ ಎಂಬ ಪ್ರಶ್ನೆ ಕಾಡುತ್ತಿದೆ. ದೇಶದಲ್ಲಿ ಆರೋಗ್ಯ ಸ್ಥಿತಿಗತಿ ಉತ್ತಮವಾಗಿಲ್ಲ ಎಂಬುದನ್ನು ಸಮೀಕ್ಷೆಯ ವರದಿಯಲ್ಲಿರುವ ಪ್ರಮುಖ ಅಂಶಗಳು ತೋರಿಸುತ್ತವೆ. ಆರೋಗ್ಯ ಇಲಾಖೆಯು ಕುಂಭಕರ್ಣ ನಿದ್ರೆಯಿಂದ ಎಚ್ಚರಗೊಳ್ಳಬೇಕು. ರಕ್ತಹೀನತೆ-ಅಪೌಷ್ಟಿಕತೆ ಸಮಸ್ಯೆ ನೀಗಿಸಲು ಈವರೆಗೆ ತಾನು ಕೈಗೊಂಡ ಕ್ರಮ ಏನೇನೂ ಸಾಲದು ಎಂಬುದನ್ನು ಅರಿತು, ಸಮಸ್ಯೆಯ ಮೂಲೋತ್ಪಾಟನೆಗೆ ಸಮರ್ಪಕ ಯೋಜನೆ ರೂಪಿಸಿ, ಕಟಿಬದ್ಧವಾಗಿ ಆ ಇಲಾಖೆ ಕೆಲಸ ಮಾಡಬೇಕು. ಕೌಟುಂಬಿಕ ಹಿಂಸೆಯನ್ನು ತಹಬಂದಿಗೆ ತರಲು ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಸೂಕ್ತ ದಾರಿಯನ್ನು ಕಂಡುಕೊಳ್ಳಬೇಕು.