ನವದೆಹಲಿ: ದೆಹಲಿ ವಾಯು ಮಾಲಿನ್ಯ ಸಮಸ್ಯೆಗೆ ಪಾಕಿಸ್ತಾನದತ್ತ ಬೆರಳು ತೋರಿಸಿದ ಉತ್ತರ ಪ್ರದೇಶ ಸರ್ಕಾರದ ವಕೀಲರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. 'ಹಾಗಾಗಿ ಪಾಕಿಸ್ತಾನದ ಕಾರ್ಖಾನೆಗಳ ಮೇಲೆ ನಿಷೇಧ ಹೇರಬೇಕೆ?' ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರುತ್ತಿರುವುದಕ್ಕೆ ಕೇಂದ್ರ ಸರ್ಕಾರವು ದೆಹಲಿ ಸರ್ಕಾರವನ್ನು ದೂರಿದೆ. ಹಾಗೆಯೇ ದೆಹಲಿ ಸರ್ಕಾರವು ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರುತ್ತಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿನ ರೈತರು ಕೃಷಿ ತ್ಯಾಜ್ಯವನ್ನು ಸುಡುತ್ತಿರುವುದು ಕಾರಣ ಎಂದೂ ದೆಹಲಿ ಸರ್ಕಾರ ಹೇಳುತ್ತಿದೆ. ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರದ ಹಿರಿಯ ವಕೀಲ ರಂಜಿತ್ ಕುಮಾರ್ ಅವರು ಪಾಕಿಸ್ತಾನವನ್ನು ಹೊಣೆಯಾಗಿಸಿದ ಪ್ರಸಂಗ ನಡೆದಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಶುಕ್ರವಾರ 17 ವರ್ಷದ ವಿದ್ಯಾರ್ಥಿ ಆದಿತ್ಯ ದುಬೇ ಅವರ ಸಲ್ಲಿಸಿರುವ ದೆಹಲಿ ವಾಯು ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ರಂಜಿತ್ ಕುಮಾರ್, 'ಪಾಕಿಸ್ತಾನದಿಂದ ಬರುತ್ತಿರುವ ಗಾಳಿ ಕಾರಣ' ಎಂದು ದೂರಿದರು.
'ಕಾರ್ಖಾನೆಗಳನ್ನು ಮುಚ್ಚುವುದರಿಂದ ಸಕ್ಕರೆ ಮತ್ತು ಹಾಲು ಉತ್ಪನ್ನ ಕಾರ್ಖಾನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ಬಹುಷಃ ಪಾಕಿಸ್ತಾನದಿಂದ ತಗ್ಗಿನಲ್ಲಿರುವ ಉತ್ತರ ಪ್ರದೇಶಕ್ಕೆ ಮಾಲಿನ್ಯದ ಗಾಳಿ ಬರುತ್ತಿದೆ' ಎಂದು ಉತ್ತರ ಪ್ರದೇಶದ ಕೈಗಾರಿಕೆಗಳ ಪರ ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, 'ಹಾಗಾಗಿ ಪಾಕಿಸ್ತಾನದ ಕಾರ್ಖಾನೆಗಳ ಮೇಲೆ ನಿಷೇಧ ಹೇರಬೇಕು ಎನ್ನುತ್ತೀರಾ?' ಎಂದು ಪ್ರಶ್ನಿಸಿದರು.
'ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಿದರೆ ರೈತರು ಕಷ್ಟ ಅನುಭವಿಸುತ್ತಾರೆ' ಎಂದು ರಂಜಿತ್ ತಿಳಿಸಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಗಾಳಿಯ ಗುಣಮಟ್ಟ ನಿರ್ವಹಣೆ ನಿಟ್ಟಿನಲ್ಲಿ ಆಯೋಗದ ಮುಂದೆ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ ಎಂದರು.
ವಾಯು ಮಾಲಿನ್ಯ ತಡೆ ನಿಟ್ಟಿನಲ್ಲಿ ಸರ್ಕಾರ ದೀರ್ಘಾವಧಿಯ ಪರಿಹಾರಗಳನ್ನು ಕಂಡುಕೊಳ್ಳಬೇಕು. ನೆರೆಯ ರಾಜ್ಯಗಳಲ್ಲಿ ವಿಸ್ತಾರವಾದ ಪ್ರದೇಶಗಳಿವೆ. ಅಲ್ಲಿ ವಿದ್ಯುತ್ ಉತ್ಪಾದನೆಗೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಬಹುದು ಎಂದು ಹಿರಿಯ ವಕೀಲ ವಿಕಾಸ್ ಸಿಂಗ್ ಸಲಹೆ ನೀಡಿದರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಈಗಾಗಲೇ ವಿದ್ಯುತ್ ನವೀಕರಣಕ್ಕಿರುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಪೀಠ ಪ್ರತಿಕ್ರಿಯಿಸಿತು.
ಮುಂದಿನ ಶುಕ್ರವಾರ ಅಹವಲು ಕೇಳುವುದಾಗಿ ತಿಳಿಸಿದೆ. ಪೀಠದಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಇದ್ದಾರೆ.