ಮುಂಬೈ: ಮಹಾರಾಷ್ಟ್ರ ಸಚಿವ ಹಾಗೂ ಶಿವಸೇನೆಯ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್, ತಮ್ಮ ಕ್ಷೇತ್ರದ ರಸ್ತೆಗಳನ್ನು ಖ್ಯಾತ ನಟಿ ಹೇಮಾ ಮಾಲಿನಿ ಅವರ ಕೆನ್ನೆಗೆ ಹೋಲಿಕೆ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಈ ರೀತಿ ಹೇಳಿಕೆ ನೀಡಿರುವುದಕ್ಕೆ ರಾಜ್ಯ ಮಹಿಳಾ ಆಯೋಗ ಸಚಿವರಿಂದ ಕ್ಷಮೆಗೆ ಆಗ್ರಹಿಸಿದೆ. ಗುಲಾಬ್ ರಾವ್ ಪಾಟೀಲ್ ಬೋಧ್ವಾಡ್ ನಗರ್ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಸಭೆಯೊಂದರಲ್ಲಿ ಮಾತನಾಡುತ್ತಾ, ತಮ್ಮ ಕ್ಷೇತ್ರದ ರಸ್ತೆಗಳನ್ನು ಹೇಮಮಾಲಿನಿ ಅವರ ಕೆನ್ನೆಗೆ ಹೋಲಿಕೆ ಮಾಡಿದ್ದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತ್ತು.
ಭಾಷಣದಲ್ಲಿ ಮಾತನಾಡಿದ್ದ ಪಾಟೀಲ್, ರಸ್ತೆಗಳು ಎಷ್ಟು ಗುಣಮಟ್ಟದ್ದಾಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಎದುರಾಳಿಗಳಿಗೆ ಸವಾಲು ಹಾಕಿದ್ದರು.
30 ವರ್ಷಗಳ ಕಾಲ ಶಾಸಕರಾಗಿರುವವರು ನನ್ನ ಕ್ಷೇತ್ರಕ್ಕೆ ಬಂದು ರಸ್ತೆಗಳು ಹೇಗಿದೆ ಎಂಬುದನ್ನು ನೋಡಬೇಕು. ಆ ರಸ್ತೆಗಳು ಹೇಮಮಾಲಿನಿ ಅವರ ಕೆನ್ನಗಳಂತೆ ಇರದೇ ಇದ್ದಲ್ಲಿ ನಾನು ರಾಜೀನಾಮೆ ನೀಡುತ್ತೇನೆ" ಎಂದು ನೀರು ಪೂರೈಕೆ ಹಾಗೂ ನೈರ್ಮಲ್ಯ ಸಚಿವ, ಜಲ್ಗಾಂವ್ ನ ಶಾಸಕರೂ ಆಗಿರುವ ಗುಲಾಬ್ ರಾವ್ ಪಾಟೀಲ್ ಹೇಳಿದ್ದಾರೆ. ಈ ಹೇಳಿಕೆಯ ವಿವರಗಳನ್ನು ಪಡೆದಿರುವ ಮಹಿಳಾ ಆಯೋಗ, ಸಚಿವರು ಕ್ಷಮೆ ಕೋರದೇ ಇದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ.