ನವದೆಹಲಿ: ದೇಶದ ಪ್ರತಿಯೊಬ್ಬ ನಾಗರಿಕನೂ ಮೂಲಭೂತ ಹಕ್ಕುಗಳನ್ನು ಪಡೆಯಲು ಅರ್ಹನಾಗಿದ್ದು, ಲೈಂಗಿಕ ಕಾರ್ಯಕರ್ತೆರಿಗೆ ಆಧಾರ್ ಕಾರ್ಡ್, ಪಡಿತರ ಮತ್ತು ಮತದಾರರ ಗುರುತಿನ ಚೀಟಿಯನ್ನು ನೀಡುವ ಪ್ರಕ್ರಿಯೆಯನ್ನು ಆದಷ್ಟು ಬೇಗ ನಡೆಸುವಂತೆ ಸುಪ್ರೀಂಕೋರ್ಟ್ ಕೇಂದ್ರ, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಕೋವಿಡ್–19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿರುವ ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತಾದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ , ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ಪೀಠವು ಈ ಆದೇಶ ನೀಡಿದೆ.
'ಲೈಂಗಿಕ ಕಾರ್ಯಕರ್ತರಿಗೆ ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಯನ್ನು ನೀಡುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ದಶಕಗಳ ಹಿಂದೆ ನಿರ್ದೇಶನ ನೀಡಲಾಗಿತ್ತು. ಆದರೆ, ಈವರೆಗೂ ಆದೇಶ ಅನುಷ್ಠಾನಕ್ಕೆ ಬಂದಿಲ್ಲ. ಇದರ ಹಿಂದೆ ಯಾವುದೇ ಕಾರಣಗಳೂ ಇಲ್ಲ. ದೇಶದ ಎಲ್ಲಾ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಗುರುತಿನ ಪುರಾವೆ ಇಲ್ಲದಿದ್ದರೂ ಲೈಂಗಿಕ ಕಾರ್ಯಕರ್ತೆಯರಿಗೆ ಒಣ ಪಡಿತರವನ್ನು ನೀಡಬೇಕು ಎಂದು ಕೇಂದ್ರ ಮತ್ತು ಇತರೆ ಸರ್ಕಾರಗಳಿಗೆ ಪೀಠ ನಿರ್ದೇಶನ ನೀಡಿದೆ.
ಅಧಿಕಾರಿಗಳು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ) ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಸಂಘಗಳ ನೆರವು ತೆಗೆದುಕೊಳ್ಳಬಹುದು. ಅವರು ಸಮುದಾಯ ಆಧಾರಿತ ಸಂಸ್ಥೆಗಳು ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿದ ನಂತರ ಲೈಂಗಿಕ ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ ಎಂದು ಪೀಠವು ನಿರ್ದೇಶಿಸಿದೆ.
ಈ ಹಿಂದೆ, 2020 ರ ಸೆಪ್ಟೆಂಬರ್ 29 ರಂದು ಸುಪ್ರೀಂ ಕೋರ್ಟ್, NACO ನಿಂದ ಗುರುತಿಸಲ್ಪಟ್ಟ ಲೈಂಗಿಕ ಕಾರ್ಯಕರ್ತರಿಗೆ ಯಾವುದೇ ಗುರುತಿನ ಪುರಾವೆಯನ್ನು ಒತ್ತಾಯಿಸದೆ ಒಣ ಪಡಿತರವನ್ನು ಒದಗಿಸುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಅಲ್ಲದೆ ಇದರ ಅನುಸರಣೆಯ ಸ್ಥಿತಿಯ ವರದಿಯನ್ನು ಕೇಳಿತ್ತು.