ತಿರುವನಂತಪುರ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ರ್ಯಾಲಿ ಮತ್ತು ಮೈಕ್ ಘೋಷಣೆಗೆ ನಿರ್ಬಂಧ ಹೇರಲು ಸೂಚಿಸಲಾಗಿದೆ. ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಆದೇಶ ಹೊರಡಿಸಿದ್ದಾರೆ. ನಿಯಂತ್ರಣವು ಮೂರು ದಿನಗಳವರೆಗೆ ಇರುತ್ತದೆ. ಅಲ್ಲದೆ ರಜೆ ಮೇಲೆ ತೆರಳಿದ್ದ ಪೋಲೀಸರಿಗೆ ಕೆಲಸಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ.
ಅಲಪ್ಪುಳದಲ್ಲಿ ನಡೆದ ಕೊಲೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹತ್ಯೆಯ ಹಿನ್ನೆಲೆಯಲ್ಲಿ ಹಿಂಸಾಚಾರ ಇತರ ಜಿಲ್ಲೆಗಳಿಗೂ ಹರಡಬಹುದು ಎಂದು ಪೋಲೀಸ್ ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ. ಸಂಘರ್ಷ ನಿಯಂತ್ರಿಸುವ ಉದ್ದೇಶದಿಂದ ಅನಿಲ್ ಕಾಂತ್ ಈ ನಿರ್ದೇಶನ ನೀಡಿದ್ದಾರೆ.
ಪ್ರಚೋದನಕಾರಿ ರ್ಯಾಲಿಗಳನ್ನು ಆಯೋಜಿಸುವುದು ಅಥವಾ ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗುವುದು ದೊಡ್ಡ ಹಿಂಸಾಚಾರಕ್ಕೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ರ್ಯಾಲಿ, ಮೈಕ್ ಘೋಷಣೆಗಳಿಗೆ ನಿರ್ಬಂಧ ಹೇರಲಾಗಿದೆ. ಸಾಮಾನ್ಯವಾಗಿ ರ್ಯಾಲಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ರಾಜ್ಯದಲ್ಲಿ ಪೋಲೀಸರ ಅನುಮತಿ ನೀಡಬೇಕಾಗುತ್ತದೆ. ಅಂತಹ ಅನುಮತಿಯನ್ನು ಪರಿಶೀಲನೆ ನಂತರವೇ ನೀಡಬೇಕು ಎಂದು ಸೂಚಿಸಲಾಗಿದೆ.
ಜಿಲ್ಲೆಯ ವಿವಿಧೆಡೆ ಗರಿಷ್ಠ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೀಗಾಗಿ ರಜೆ ಮೇಲೆ ತೆರಳಿರುವವರು ಮತ್ತೆ ತುರ್ತು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ರಾಜ್ಯ ಪೋಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಎಸ್ಪಿಗಳು ಸೇರಿದಂತೆ ಹಿರಿಯ ಪೋಲೀಸ್ ಅಧಿಕಾರಿಗಳು ಠಾಣೆಗಳಲ್ಲೇ ಉಳಿದು ತಮ್ಮ ಅಧೀನ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವಂತೆ ಸೂಚಿಸಿದ್ದಾರೆ.