ಕೊಯಮತ್ತೂರು: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮತ್ತು ಇತರ 11 ಸೇನಾ ಅಧಿಕಾರಿಗಳ ಪಾರ್ಥಿವ ಶರೀರವನ್ನು ಹೊತ್ತೊಯ್ಯುತ್ತಿದ್ದ ಎರಡು ಆಂಬ್ಯುಲೆನ್ಸ್ ಗಳು ತಮಿಳುನಾಡಿನ ಮೆಟ್ಟುಪಾಳ್ಯಂ ಬಳಿ ಗುರುವಾರ ಅಪಘಾತಕ್ಕೀಡಾಗಿವೆ.
ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಮೃತದೇಹಗಳನ್ನು ನೀಲಗಿರಿಯ ಎಂಆರ್ ಸಿ ಬ್ಯಾರಕ್ಸ್ ಚೌಕದಿಂದ ಸೂಲೂರು ವಾಯುನೆಲೆಗೆ ಬೆಂಗಾವಲು ಪಡೆಯೊಂದಿಗೆ ಸಾಗಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಆ್ಯಂಬುಲೆನ್ಸ್ ಮುಂದೆ ಚಲಿಸುತ್ತಿದ್ದ ಮತ್ತೊಂದು ಆ್ಯಂಬುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಲ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಕ್ಷಣವೇ ಯೋಧರ ಪಾರ್ಥಿವ ಶರೀರವನ್ನು ಬೇರೊಂದು ಆ್ಯಂಬುಲೆನ್ಸ್‌ಗೆ ಶಿಫ್ಟ್ ಮಾಡಿ ಏರ್ಬೇಸ್ಗೆ ತರಲಾಗಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದ್ದು, ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ.