ಕಾಸರಗೋಡು: ಕೇರಳ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೆ-ರೈಲು ಯೋಜನೆ ರಾಜ್ಯವನ್ನು ವಿನಾಶದತ್ತ ಕೊಂಡೊಯ್ಯಲಿರುವುದಾಗಿ ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸ್ಥಾಪಕ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಜಿಲ್ಲೆಗೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಕಾಂಗ್ರೆಸ್ ಅಥವಾ ಐಕ್ಯರಂಗ ಅಭಿವೃದ್ಧಿಕಾರ್ಯಗಳಿಗೆ ನಿರಂತರ ಪ್ರೋತ್ಸಾಹ ನೀಡಲಿದೆ. ಯಾವುದೇ ಪೂರ್ವಭಾವಿ ತಯಾರಿ, ತಜ್ಞರ ಜತೆ ಸಮಾಲೋಚನೆ ನಡೆಸದೆ ಬೃಹತ್ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿರುವ ಎಡರಂಗ ಸರ್ಕಾರದ ಧೋರಣೆ ಸಂಶಯಕ್ಕೆ ಕಾರಣವಾಗಿದೆ. ಈ ಯೋಜನೆ ಜಾರಿಗೊಂಡಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುವುದಲ್ಲದೆ, ರಾಜ್ಯ ಎರಡು ಹೋಳಾಗಲಿರುವುದಾಗಿ ಆತಂಕ ವ್ಯಕ್ತಪಡಿಸಿದರು. ಕೆ-ರೈಲು ಯೋಜನೆಯನ್ನು ಕಾಂಗ್ರೆಸ್ ವಿರೋಧಿಸಲಿದ್ದು, ಈ ಬಗ್ಗೆ ಐಕ್ಯರಂಗದಲ್ಲೂ ಒಗ್ಗಟ್ಟು ಮುಂದುವರಿಯಲಿರುವುದಾಗಿ ತಿಳಿಸಿದರು.