ತಿರುವನಂತಪುರ: ಧರ್ಮ ಧರ್ಮಗಳ ನಡುವೆ ಜಗಳ ಬೇಡ ಎಂಬ ಶ್ರೀ ನಾರಾಯಣ ಗುರುಗಳ ಸಂದೇಶ ಈಗ ಹೆಚ್ಚು ಪ್ರಸ್ತುತವಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಶ್ರೀ ನಾರಾಯಣ ಗುರುಗಳ ನಿಜವಾದ ಸಂದೇಶವೆಂದರೆ ಮನುಷ್ಯರನ್ನು ಪ್ರೀತಿಸುವುದು. ಇಂದದು ಮರೀಚಿಕೆಯೆನಿಸಿದೆ. ಅಂದರೆ ಶ್ರೀಗಳ ಸಂದೇಶಗಳನ್ನು ಅರ್ಥ ಮಾಡಿಕೊಳ್ಳದ ಜನ ಇನ್ನೂ ಇದ್ದಾರೆ ಎಂದ ಪಿಣರಾಯಿ ವಿಜಯನ್ ಹೇಳಿದರು. ಇದರಿಂದ ಆಗುವ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀನಾರಾಯಣ ಗುರುಗಳ ಸಂದೇಶವನ್ನು ಎಲ್ಲೆಡೆ ಸಾರಬೇಕಿದೆ ಎಂದರು. 89ನೇ ಶಿವಗಿರಿ ಯಾತ್ರೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ಸರ್ಕಾರವು ಗುರುದೇವರ ಸಂದೇಶದ ಮೇಲೆ ಕಾರ್ಯನಿರ್ವಹಿಸುತ್ತದೆ. ಯಾವ ಕ್ಷಣದಲ್ಲಾದರೂ ಕೋಮುವಾದಿ ಫ್ಯಾಸಿಸಂ ಎದುರಾಗುವ ಅಪಾಯ ಎಲ್ಲರನ್ನೂ ಬಾಧಿಸುತ್ತಿರುವ ಕಾಲವಿದು. ಕೆಲವರು ಗುರುವನ್ನು ಯಾವುದೇ ಪಂಗಡದ ಪ್ರತಿನಿಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಇಲ್ಲಿಯೇ ಗುರುಗಳ ಜಾತ್ಯತೀತ ಚಿಂತನೆ ಪ್ರಸ್ತುತವಾಗುತ್ತದೆ ಎಂದು ಸಿಎಂ ಹೇಳಿದರು. ಕಾರ್ಯಕ್ರಮದಲ್ಲಿ ಸಂಸದೆ ಕನಿಮೊಳಿ ಕೂಡ ಭಾಗವಹಿಸಿದ್ದರು.
ಸಹಸ್ರಾರು ಶ್ರೀನಾರಾಯಣ ಭಕ್ತರ ಸಮ್ಮುಖದಲ್ಲಿ ಧರ್ಮಸಂಘದ ಅಧ್ಯಕ್ಷ ಸ್ವಾಮಿ ಸಚ್ಚಿದಾನಂದ ಅವರು ಧರ್ಮ ಧ್ವಜಾರೋಹಣ ಮಾಡುವ ಮೂಲಕ ಈ ವರ್ಷದ ಶಿವಗಿರಿ ಯಾತ್ರೆಗೆ ಚಾಲನೆ ನೀಡಿದರು. ಮೂರು ದಿನಗಳ ಯಾತ್ರೆಯಲ್ಲಿ ವಿವಿಧ ವಿಷಯಗಳ ಕುರಿತು ಸಮ್ಮೇಳನಗಳು ನಡೆಯಲಿವೆ. ಶ್ರೀನಾರಾಯಣ ಗುರುಗಳು ಸ್ಥಾಪಿಸಿದ ಬ್ರಹ್ಮ ವಿದ್ಯಾಲಯದ ಕನಕ ಜಯಂತಿ ನಿಮಿತ್ತ ವಿಶೇಷ ಸಭೆ ನಡೆಯಿತು. ಶಬರಿಮಲೆ, ಗುರುವಾಯೂರು ಸೇರಿದಂತೆ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರನ್ನೂ ಅರ್ಚಕರಾಗಿ ಪರಿಗಣಿಸಬೇಕು ಎಂದು ಶ್ರೀನಾರಾಯಣ ಧರ್ಮ ಸಂಘದ ಕಾರ್ಯದರ್ಶಿ ಸ್ವಾಮಿ ಋತಂಬರಾನಂದ ಆಗ್ರಹಿಸಿದರು.