ಚೆನ್ನೈ: ತಮಿಳುನಾಡಿಗೂ ಕೋವಿಡ್ ವೈರಸ್ ನೂತನ ರೂಪಾಂತರಿ ಓಮಿಕ್ರಾನ್ ಕಾಲಿಟ್ಟಿದ್ದು, ನೈಜಿರಿಯಾದಿಂದ ಬಂದಿದ್ದ ಚೆನ್ನೈ ಮೂಲದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಕೆಲವು ದಿನಗಳ ಹಿಂದೆ ನೈಜೀರಿಯಾದಿಂದ ಆಗಮಿಸಿದ್ದ 47 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕುಟುಂಬದ ಆರು ಸದಸ್ಯರೊಂದಿಗೆ ಕೊರೊನಾ ವೈರಸ್‌ಗೆ ತುತ್ತಾಗಿದ್ದರು.
ಹೀಗಾಗಿ ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಅವರಲ್ಲಿ ಓಮಿಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.
ಡಿಸೆಂಬರ್ 10 ರಂದು ನೈಜೀರಿಯಾದಿಂದ ದೋಹಾ ಮೂಲಕ ಈ ವ್ಯಕ್ತಿ ಚೆನ್ನೈಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ವರದಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅವರು ಮತ್ತು ಅವರ ಸಂಪರ್ಕಿತರ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಅವರಲ್ಲಿ ಓಮಿಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ. ಅವರ ಕುಟುಂಬದ ಆರು ಸದಸ್ಯರು ಸಹ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ರೋಗಲಕ್ಷಣವಿಲ್ಲದ ಅವರ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಕರನ್ನು "ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಈಗ ಚೆನ್ನೈನಲ್ಲಿರುವ ದಿ ಕಿಂಗ್ ಇನ್‌ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್ ಮತ್ತು ರಿಸರ್ಚ್‌ಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.