ಬದಿಯಡ್ಕ: ಕೋವಿಡ್ ನಿಯಂತ್ರಣದ ಕಾಲಾವಧಿಯಲ್ಲಿ ಶಿಕ್ಷಣ ವ್ಯವಸ್ಥೆ ತೀವ್ರ ಬಿಕ್ಕಟ್ಟನ್ನು ಎದುರಿಸಿದೆ. ಇದರಿಂದ ವಿದ್ಯಾರ್ಥಿಗಳ ಅನುಭವಗಳು ಮತ್ತು ಪರಿವರ್ತನೆಗಳಿಗೆ ಕಾರಣವಾಗಿದೆ. ವಿಭಿನ್ನ ಅನುಭವ, ಪರಿವರ್ತನೆಗಳೊಂದಿಗೆ ಇಂದೀಗ ಶಾಲೆಗಳಿಗೆ ವಿದ್ಯಾರ್ಥಿಗಳು ಮತ್ತೆ ಆಗಮಿಸಿದ್ದು ವಿದ್ಯಾರ್ಥಿಗಳ ಸಕಾರಾತ್ಮಕ ಅಂಶಗಳನ್ನು ಉಳಿಸಿ ಪೋಶಿಸುವ ಮತ್ತು ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಅತಿಜೀವನಂ-ಬದುಕುಳಿಯುವಿಕೆ ಕಾರ್ಯಕ್ರಮ ಪ್ರಾರಂಭಿಸಿದೆ ಎಂದು ಬೇಳ ಸಂತ ಬಾರ್ತಲೋಮಿಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅಶ್ವಿನಿ ತಿಳಿಸಿದರು.
ರಾಜ್ಯ ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಅತಿಜೀವನಂ-ಬದುಕುಳಿಯುವಿಕೆ ಕಾರ್ಯಕ್ರಮದ ಭಾಗವಾಗಿ ಬೇಳ ಸಂತ ಬಾರ್ತಲೋಮಿಯ ಶಾಲೆಯಲ್ಲಿ ಬುಧವಾರ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾದ ಇಂತಹ ಕಾರ್ಯಚಟುವಟಿಕೆಗಳನ್ನು ಯಶಸ್ವಿಗೊಳಿಸುವ ಮೂಲಕ ಮುಂದಿನ ಜನಾಂಗವನ್ನು ಸಮರ್ಥವಾಗಿ ಕಟ್ಟಿ ಬೆಳೆಸುವ ಹೊಣೆ ಶಿಕ್ಷಕರು, ಪಾಲಕರು ಹಾಗೂ ಸಮಾಜದ ಪ್ರತಿಯೊಬ್ಬನ ಕರ್ತವ್ಯ ಎಂದವರು ತಿಳಿಸಿದರು.
ಹಿರಿಯ ಶಿಕ್ಷಕಿ ಫಿಲೋಮಿನ ಟೀಚರ್ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ, ಶಿಕ್ಷಕಿಯರು ನೇತೃತ್ವ ವಹಿಸಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳು, ಆಟ ಮಕ್ಕಳ ಮಾನಸಿಕ ಆರೋಗ್ಯದ ವಿಶ್ಲೇಷಣೆ, ಸಮಸ್ಯೆಗಳ ವಿಶ್ಲೇಷಣೆ, ಹೊಸ ಅವಧಿಯ ಸೌಹಾರ್ಧ ಗುಂಪುಗಳ ಅವಿಷ್ಕಾರ, ಪರಿಚಯ, ಏಕಾಂತ ಮನೋಭಾವದ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಮೊದಲಾದವುಗಳು ನಡೆಯಿತು.