ನವದೆಹಲಿ: ದೇಶದ ನಿಗದಿತ ಅಣೆಕಟ್ಟುಗಳ ಸುರಕ್ಷತೆಗಾಗಿ ಸಾಂಸ್ಥಿಕ ಕಾರ್ಯವಿಧಾನ ಸ್ಥಾಪಿಸುವ ಮಸೂದೆಯನ್ನು ಸಂಸತ್ತು ಬುಧವಾರ ಅಂಗೀಕರಿಸಿದೆ.
ರಾಜ್ಯಸಭೆಯು ಕೆಲವೊಂದು ಸಣ್ಣ ಬದಲಾವಣೆಗಳೊಂದಿಗೆ ಡಿಸೆಂಬರ್ 2ರಂದು ಅಣೆಕಟ್ಟು ಸುರಕ್ಷತಾ ಮಸೂದೆಗೆ ಅನುಮೋದನೆ ನೀಡಿತ್ತು.
ಇದೇ ವೇಳೆ ಮಸೂದೆಯ ವರ್ಷವನ್ನು 2019-2021 ಎಂದು ಬದಲಾವಣೆ ಮಾಡಲಾಗಿತ್ತು.
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಅಣೆಕಟ್ಟು ವೈಫಲ್ಯ ಸಂಬಂಧಿತ ವಿಪತ್ತುಗಳಿಂದ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಈ ಮಸೂದೆಗೆ ಅಂಗೀಕಾರ ನೀಡಲಾಗಿದ್ದು, ಈ ಮಸೂದೆಯಡಿ ನಿಗದಿತ ಅಣೆಕಟ್ಟುಗಳ ಕಣ್ಗಾವಲು, ಪರಿಶೀಲನೆ, ಕಾರ್ಯಾಚರಣೆ ನಡೆಸಲಾಗುತ್ತದೆ. ಅಣೆಕಟ್ಟುಗಳ ಸುರಕ್ಷತೆಗಾಗಿ ರಾಷ್ಟ್ರೀಯ ಸಮಿತಿಯನ್ನು (ಎನ್‌ಸಿಡಿಎಸ್) ರೂಪಿಸುವಂತೆಯೂ ಈ ಮಸೂದೆಯಲ್ಲಿ ಹೇಳಲಾಗಿದೆ.
ಈ ಹಿಂದೆ 2019, ಆಗಸ್ಟ್‌ನಲ್ಲಿ ಲೋಕಸಭೆಯು ಈ ಮಸೂದೆಯನ್ನು ಅಂಗೀಕರಿಸಿತ್ತು.