ಕಾಸರಗೋಡು: ಕುಡ್ಪಂಗುಳಿ ವಿಸಿಬಿ ಮತ್ತು ಕಾಲುಸಂಕವನ್ನು ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಉದ್ಘಾಟಿಸಿದರು. ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿರುವ ಬದಿಯಡ್ಕ ಪಂಚಾಯಿತಿಯನ್ನು ಜಲಜೀವನ ಮಿಷನ್ ವ್ಯಾಪ್ತಿಗೆ ಸೇರಿಸಿ ಸರಕಾರದ ಯೋಜನೆಯಾಗಿ ಎಲ್ಲ ಮನೆಗಳಿಗೂ ಕುಡಿಯುವ ನೀರು ಒದಗಿಸಿ 2024ರ ವೇಳೆಗೆ ಪಂಚಾಯಿತಿಯ ಎಲ್ಲ ಜನತೆಗೆ ಕುಡಿಯುವ ನೀರು ದೊರೆಯಲಿದೆ ಎಂದು ಸಚಿವರು ತಿಳಿಸಿದರು. ಅಂತರ್ಜಲ ಕುಸಿಯುತ್ತಿರುವ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ವಿನೂತನ ಯೋಜನೆಯಾದ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಕಾಸರಗೋಡಿಗೆ ವಿಶೇಷ ಪರಿಗಣನೆ ನೀಡಲಾಗುವುದು. ಕೋವಿಡ್ ಅವಧಿಯಲ್ಲಿ ಆಮ್ಲಜನಕದ ಮೌಲ್ಯವನ್ನು ನಾವು ಅರ್ಥಮಾಡಿಕೊಂಡಂತೆ ನಾವು ನೀರಿನ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು. ಜಲಸಂಪನ್ಮೂಲ ಇಲಾಖೆ ಹಾಗೂ ಸರಕಾರ ಮುಂದಿನ 20 ವರ್ಷಗಳ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದರು. ವಾಣಿಜ್ಯ ಬೆಳೆಗಳಿಗೂ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. 2018ರಲ್ಲಿ ಆರಂಭವಾದ ವಿಸಿಬಿ ಹಾಗೂ ಕಾಲುಸಂಕ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದ ಶಾಸಕ, ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಸಚಿವರು ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ವಹಿಸಿದ್ದರು. ಸಣ್ಣ ನೀರಾವರಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ. ರತ್ನಾಕರನ್ ವರದಿ ಮಂಡಿಸಿದರು. ನಬಾರ್ಡ್ ಎಂಜಿಎಂ ಕೆ.ಬಿ.ದಿವ್ಯಾ, ಬದಿಯಡ್ಕ ಪಂಚಾಯಿತಿ ಅಧ್ಯಕ್ಷ ಬಿ. ಶಾಂತಾ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ, ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಭಟ್, ಬ್ಲಾಕ್ ಪಂಚಾಯತ್ ಸದಸ್ಯೆ ಜಯಂತಿ, ವಾರ್ಡ್ ಸದಸ್ಯರಾದ ಹಮೀದ್ ಪಲ್ಲತ್ತಡುಕ, ಅನಿತಾ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಕೆ ಜಗನ್ನಾಥ ಶೆಟ್ಟಿ, ಕುಂಚಾರ್ ಮಹಮ್ಮದ್ ಕುಂuಟಿಜeಜಿiಟಿeಜ ಹಾಜಿ, ಎಂ ಕೃಷ್ಣನ್, ಮಾಹಿನ್ ಕೇಳೋಟ್, ದಾಮೋದರನ್, ಹರೀಶ್ ನಾರಂಪಾಡಿ , ಕುರಿಯಾಕೋಸ್ ಪ್ಲಪ್ಪರಂಬಿಲ್, ಅನಂತನ್ ನಂಬಿಯಾರ್, ಅಬ್ರಹಾಂ ತೋಣಕ್ಕರ, ಅಬ್ದುಲ್ ರಹಮಾನ್ ಬ್ಯಾಂಕೋಟ್, ಅಜೀಜ್ ಕಡಪ್ಪುರಂ, ವಿ.ಕೆ.ರಮೇಶನ್, ಟಿಂಬರ್ ಮುಹಮ್ಮದ್ ಮತ್ತು ನೀರು ಬಳಕೆದಾರರ ಪ್ರಾಧಿಕಾರದ ಕಾರ್ಯದರ್ಶಿ ಸತಾರ್ ಕಾಡುಪ್ಪಂಕುಝಿ ಈ ಸಂದರ್ಭದಲ್ಲಿ ಮಾತನಾಡಿದರು. ಸಣ್ಣ ನೀರಾವರಿ ಕಾಸರಗೋಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಟಿ.ಸಂಜೀವ್ ಸ್ವಾಗತಿಸಿ, ಸಣ್ಣ ನೀರಾವರಿ ಸಹಾಯಕ ಇಂಜಿನಿಯರ್ ಟೋನಿ ಮ್ಯಾಥ್ಯೂ ವಂದಿಸಿದರು.
ಬದಿಯಡ್ಕ ವ್ಯಾಪ್ತಿಯ ಮನೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಶಿರಿಯಾ ನದಿಯ ಮುಖ್ಯ ಉಪನದಿಯಾದ ಪಳ್ಳತ್ತಡ್ಕ ನದಿಗೆ ಕುಂಡಂಗುಳಿ ಯುಲ್ಲಿ ನಬಾರ್ಡ್ ನಿಧಿಯಿಂದ ನಿರ್ಮಿಸಿರುವ ವಿಸಿಬಿ ಹಾಗೂ ಕಾಲುಸಂಕವನ್ನು ಸಚಿವರು ಉದ್ಘಾಟಿಸಿದರು. ಯೋಜನೆಯ ನಿರ್ಮಾಣ ವೆಚ್ಚ 3.64 ಕೋಟಿ.ರೂ ಆಗಿದೆ. 44.55 ಮೀಟರ್ ಉದ್ದದ ರಚನೆಯು 3 ಮೀಟರ್ ಎತ್ತರದವರೆಗೆ ನೀರನ್ನು ಸಂಗ್ರಹಿಸಬಹುದು. ಮೇಲಿನ ಮತ್ತು ಕೆಳಗಿನ ಎರಡೂ ಬದಿಗಳಲ್ಲಿ ಅಗತ್ಯ ರಕ್ಷಣಾ ಗೋಡೆಯನ್ನು ನಿರ್ಮಿಸಲಾಗಿದೆ. ಯೋಜನೆಯ ಒಟ್ಟು ಸಂಗ್ರಹ ಸಾಮಥ್ರ್ಯ 11.25 ಕೋಟಿ ಲೀಟರ್ ಆಗಿದ್ದು, 2 ಕಿ.ಮೀ ದೂರದವರೆಗೆ ನೀರು ಸಂಗ್ರಹಿಸಬಹುದಾಗಿದೆ. ಯೋಜನೆಯ ಭಾಗವಾಗಿ ನೀರು ಸಂಗ್ರಹಣೆಗೆ ಬಳಸುವ ಎಫ್‍ಆರ್‍ಪಿ ಶೆಟರ್‍ಗಳನ್ನು ಸಂಗ್ರಹಿಸಲು ಅಗತ್ಯವಿರುವ ಸ್ಟೋರ್ ರೂಂ ಅನ್ನು ನಿರ್ಮಿಸಲಾಗಿದೆ. ಯೋಜನೆ ಪೂರ್ಣಗೊಂಡರೆ ಎರಡೂ ದಂಡೆಗಳ 95 ಹೆಕ್ಟೇರ್ ಕೃಷಿ ಭೂಮಿ ನೀರಾವರಿಗೆ ಒಳಪಡಲಿದೆ. ಜತೆಗೆ, ಈ ಯೋಜನೆಯಿಂದ ಕಡುಪಂ ಹಳ್ಳದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಲಿದೆ.