ನವದೆಹಲಿ: ತಮ್ಮ ನೆರೆ ಮನೆಯ ವಕೀಲರೊಬ್ಬರನ್ನು ಕೊಲ್ಲಲು ದೆಹಲಿ ನ್ಯಾಯಾಲಯದಲ್ಲಿ ಕಡಿಮೆ ತೀವ್ರತೆಯ ಸ್ಫೋಟಕವನ್ನು ಇರಿಸಿದ ಆರೋಪದ ಮೇಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ 47 ವರ್ಷ ವಯಸ್ಸಿನ ವಿಜ್ಞಾನಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 9 ರಂದು ರೋಹಿಣಿ ಕೋರ್ಟ್ ಕಾಂಪ್ಲೆಕ್ಸ್‌ನ ಕೊಠಡಿ ಸಂಖ್ಯೆ 102 ರಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದರು. ಡಿಆರ್‌ಡಿಒದ ವಿಜ್ಞಾನಿ ಭರತ್ ಭೂಷಣ್ ಕಟಾರಿಯಾ ಬಂಧಿತ. ಈ ಬಗ್ಗೆ 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಕಟಾರಿಯಾ ತನ್ನ ನೆರೆಮನೆಯ ವಕೀಲರೊಬ್ಬರನ್ನು ಕೊಲ್ಲಲು ಉದ್ದೇಶಿಸಿದ್ದರು. ಹೀಗಾಗಿ ನ್ಯಾಯಾಲಯದ ಒಳಗೆ ಟಿಫನ್ ಬಾಕ್ಸ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇರಿಸಿದ್ದರು.
ಡಿಸೆಂಬರ್ 9 ರಂದು ಬೆಳಿಗ್ಗೆ 9.33 ಕ್ಕೆ ಎರಡು ಚೀಲಗಳೊಂದಿಗೆ ನ್ಯಾಯಾಲಯ ಪ್ರವೇಶಿಸಿದ್ದ ಕಟಾರಿಯಾ, ಒಂದು ಚೀಲವನ್ನು ನ್ಯಾಯಾಲಯದ ಕೊಠಡಿಯೊಳಗೆ ಬಿಟ್ಟು, ಬೆಳಗ್ಗೆ 10.35ರ ಹೊತ್ತಿಗೆ ಅಲ್ಲಿಂದ ಹೋಗಿದ್ದರು ಎಂದು ಆರೋಪಿಸಲಾಗಿದೆ.
ವಕೀಲ ಮತ್ತು ವಿಜ್ಞಾನಿ ಇಬ್ಬರೂ ಹಲವು ಪ್ರಕರಣಗಳನ್ನು ಪರಸ್ಪರರ ಮೇಲೆ ದಾಖಲಿಸಿಕೊಂಡಿದ್ದಾರೆ. ಅವರು ನೆರೆಹೊರೆಯವರಾಗಿದ್ದು, ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಕಟಾರಿಯಾ ಮೇಲ್ನೋಟಕ್ಕೆ ವಕೀಲನ ಮೇಲೆ ದ್ವೇಷವನ್ನು ಹೊಂದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಟಾರಿಯಾ ವಕೀಲನ ವಿರುದ್ಧ ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ, ವಿಜ್ಞಾನಿ ವಿರುದ್ಧ ವಕೀಲ ಏಳು ಪ್ರಕರಣಗಳನ್ನು ದಾಖಲಿಸಿದ್ದಾರೆ.
ವಕೀಲ ನೆಲಮಹಡಿಯಲ್ಲಿ ವಾಸಿಸುತ್ತಿದ್ದರೆ, ಆರೋಪಿ ವಿಜ್ಞಾನಿ ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ರಚಿಸಲಾದ ತಂಡಗಳು ರೋಹಿಣಿ ನ್ಯಾಯಾಲಯ ಸಂಕೀರ್ಣದ ಒಳಗೆ ಮತ್ತು ಹೊರಗೆ ಹಲವಾರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದರು. ನಂತರ ಅವರು ಕಟಾರಿಯಾ ಅವರನ್ನು ಬಂಧಿಸಿದ್ದಾರೆ. ಈ ನಡುವೆ ಹಲವು ಶಂಕಿತರನ್ನು ಗುರುತಿಸಿ ವಿಚಾರಣೆ ನಡೆಸಲಾಗಿತ್ತು.
ದ್ವಿಚಕ್ರ ವಾಹನಗಳ ಕಳ್ಳತನ ತಡೆಯಲು ಬಳಸಲಾಗುವ 'ಅಯಂಟಿ ತೆಫ್ಟ್' ವ್ಯವಸ್ಥೆಯನ್ನು ವಿಜ್ಞಾನಿಯು ಸ್ಫೋಟಕಕ್ಕೆ ರಿಮೋಟ್ ಆಗಿ ಬಳಸಿಕೊಂಡಿದ್ದರು. ಆದರೆ, ಅವರು ಐಇಡಿಯನ್ನು ಸರಿಯಾಗಿ ಹೊಂದಿಸದ ಕಾರಣ ಡಿಟೋನೇಟರ್ ಮಾತ್ರ ಸ್ಫೋಟಗೊಂಡಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕಟಾರಿಯಾ ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ ವಸ್ತುಗಳನ್ನೇ ಬಳಸಿಕೊಂಡು ಸ್ಫೋಟಕ ತಯಾರಿಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.