ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) 2021ರಲ್ಲಿ ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ₹ 51 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಹೂಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. 2019ರಲ್ಲಿ ₹ 1.35 ಲಕ್ಷ ಕೋಟಿ ಹೂಡಿಕೆ ಮಾಡಿದ್ದರು. 2020ರಲ್ಲಿ ಹೂಡಿಕೆಯ ಮೊತ್ತವು ₹ 1.03 ಲಕ್ಷ ಕೋಟಿಗಳಷ್ಟಿತ್ತು.
ಹೂಡಿಕೆದಾರರು 2021ರಲ್ಲಿ ಷೇರುಗಳ ಖರೀದಿಗೆ ₹ 26,001 ಕೋಟಿ, ಸಾಲಪತ್ರಗಳ ಖರೀದಿಗೆ ₹ 23,222 ಕೋಟಿ ಹಾಗೂ ಹೈಬ್ರಿಡ್ ಮಾರ್ಗಗಳಲ್ಲಿ ₹ 1,848 ಕೋಟಿ ಹೂಡಿಕೆ ಮಾಡಿದ್ದಾರೆ.
ಇದರಿಂದಾಗಿ ಒಟ್ಟಾರೆ ಹೂಡಿಕೆಯು ₹ 51,068 ಕೋಟಿಗಳಷ್ಟಾಗಿದೆ.
ವಿದೇಶಿ ಬಂಡವಾಳ ಹೂಡಿಕೆದಾರರು ಸತತ ಮೂರನೇ ವರ್ಷವೂ ದೇಶದ ಮಾರುಕಟ್ಟೆಯಲ್ಲಿ ಸಾಲಪತ್ರಗಳ ಖರೀದಿಗೆ ಹೆಚ್ಚಿನ ಗಮನ ನೀಡಿದ್ದಾರೆ. ಆದರೆ ಜಾಗತಿಕವಾಗಿ ನಗದು ಲಭ್ಯತೆ ಹೆಚ್ಚಿಗೆ ಇರುವುದು ಹಾಗೂ ಇತರೆ ಕಾರಣಗಳಿಂದಾಗಿ ಹೂಡಿಕೆಯಲ್ಲಿ ಇಳಿಕೆ ಕಾಣುವಂತಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ವೃದ್ಧಿ ಆಗಿರುವುದು, ಭಾರತವನ್ನೂ ಒಳಗೊಂಡು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಂದ ಬಂಡವಾಳ ಹೊರಹರಿವು ಕಂಡುಬರುತ್ತಿರುವುದು, ಲಾಭ ಗಳಿಕೆಯ ವಹಿವಾಟು ಸೇರಿದಂತೆ ಇನ್ನೂ ಹಲವು ಕಾರಣಗಳಿಂದಾಗಿ ಈ ವರ್ಷದಲ್ಲಿ 'ಎಫ್‌ಪಿಐ' ಒಳಹರಿವು ಕಡಿಮೆ ಆಗಿದೆ ಎಂದು ಜೂಲಿಯಸ್ ಬೇರ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮಿಲಿಂದ್ ಮುಚ್ಚಾಲ್ ತಿಳಿಸಿದ್ದಾರೆ.