ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಎಡನೀರಿನಿಂದ ಎದುರ್ತೋಡ್ ವರೆಗಿನ ಶಿಥಿಲಗೊಂಡ ರಸ್ತೆಯನ್ನು ತಕ್ಷಣ ದುರಸ್ತಿ ನಡೆಸುವಂತೆ ಆಗ್ರಹಿಸಿ ನಾಗರಿಕರ ಒಕ್ಕೂಟ ವತಿಯಿಂದ ಮಂಗಳವಾರ ಪ್ರತಿಭಟನಾ ರ್ಯಾಲಿ ನಡೆಯಿತು.
ರಸ್ತೆ ಶಿಥಿಲಾವಸ್ಥೆ ಹಿನ್ನೆಲೆಯಲ್ಲಿ ಕೆಲವೊಂದು ಖಾಸಗಿ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ವಿದ್ಯಾರ್ಥಿಗಳು, ನಾಗರಿಕರು ಸಮಸ್ಯೆ ಅನುಭವಿಸುವಂತಾಗಿದೆ.ಎದುರ್ತೋಡಿನಿಂದ ಎಡನೀರು ಮಾಸ್ತಿಕುಂಡು ವರೆಗಿನ ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಅಗೆದುಹಾಕಿ ಪ್ರಸಕ್ತ ಸಂಚರಿಸಲಾಗದಷ್ಟು ಶಿಥಿಲಗೊಂಡಿದೆ. ಕಳೆದ ಹದಿನೈದು ವರ್ಷಗಳಿಂದ ಹಾಳಾದ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಚಾಲಕರು ಈ ರಸ್ತೆ ಅಭಿವೃದ್ಧಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದು, ಸರ್ಕಾರ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆ ಇಲ್ಲಿನ ನಾಗರಿಕರು ಹಾಗೂ ಪ್ರಯಾಣಿಕರ ತಾಳ್ಮೆ ಪರೀಕ್ಷಿಸುವಂತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಎದುರ್ತೋಡಿನಿಂದ ಆರಂಭಗೊಂಡ ಮೆರವಣಿಗೆ ಎಡನೀರಿನಲ್ಲಿ ಸಮಾರೋಪಗೊಂಡಿತು. ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಸಿ.ವಿ ಜೇಮ್ಸ್ ಚೆರ್ಕಳ ಉದ್ಘಾಟಿಸಿದರು. ಇಬ್ರಾಹಿಂ ಕೆ.ಎಂ ಅಧ್ಯಕ್ಷತೆ ವಹಿಸಿದ್ದರು. ಶಾಂತಕುಮಾರಿ ಟೀಚರ್, ಗ್ರಾಪಂ ಸದಸ್ಯ ಸಲೀಂ ಎಡನೀರ್, ಅಬೂಬಕ್ಕರ್ ಎದಿರ್ತೋಡ್, ಕೃಷ್ಣನ್ ನಾಯರ್ ಕಾಟುಕೊಚ್ಚಿ, ಲತೀಫ್ ಪಳ್ಳತ್ತಡ್ಕ ಮುಂತಾದವರು ಉಪಸ್ಥಿತರಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರುಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.