ಬೆಂಗಳೂರು: ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಒಬ್ಬರು ಪ್ರಯಾಣದ ಇತಿಹಾಸ ಹೊಂದಿರದ ಬೆಂಗಳೂರಿನವರಾಗಿದ್ದು, ಈಗಾಗಲೇ ಸಮುದಾಯ ಹರಡುವಿಕೆಯ ಹೆಚ್ಚಿನ ಸಂಭವನೀಯತೆಯನ್ನು ಇದು ಸೂಚಿಸುತ್ತದೆ.
ಬೆಂಗಳೂರಿನಲ್ಲಿ ಪಾಸಿಟಿವ್ ಬಂದಿರುವ 46 ವರ್ಷದ ವ್ಯಕ್ತಿ ವೈದ್ಯಕೀಯ ಡಾಕ್ಟರ್ ಆಗಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ತಲೆನೋವು, ಸುಸ್ತು ಮತ್ತು ಲಘು ಜ್ವರ ಕಾಣಿಸಿಕೊಂಡ ನಂತರ ಅವರು ಸ್ವಯಂ ಪ್ರೇರಿತರಾಗಿ ಪರೀಕ್ಷೆ ನಡೆಸಿ, ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಅವರಿಗೆ ಪಾಸಿಟಿವ್ ವರದಿ ಬಂದಿತ್ತು. ಅದನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳಿಸಿದಾಗ ಓಮಿಕ್ರಾನ್ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಓಮಿಕ್ರಾನ್ ಪತ್ತೆಯಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 13 ಮಂದಿ ಹಾಗೂ 205 ಮಂದಿ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸಲಾಗಿದೆ. ಅವರಲ್ಲಿ ಮೂವರು ಪ್ರಾಥಮಿಕ ಮತ್ತು ಇಬ್ಬರು ದ್ವಿತೀಯ ಸಂಪರ್ಕಿತರಲ್ಲಿ ಪಾಸಿಟಿವ್ ಬಂದಿದೆ. ಪ್ರತಿಯೊಬ್ಬರು ಕೋವಿಡ್-19 ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ಓಮಿಕ್ರಾನ್ ಪತ್ತೆಯಾಗಿರುವ ವ್ಯಕ್ತಿಗೆ ಪ್ರಯಾಣ ಇತಿಹಾಸವಿಲ್ಲ, ಇದು ಈಗಾಗಲೇ ಎಲ್ಲಡೆ ಹರಡಿರುವ ಸಾಧ್ಯತೆಯೂ ಇದೆ. ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆದರೆ, ಭಯಪಡಬೇಕಾದ ಅಗತ್ಯವಿಲ್ಲ, ಸಾರ್ವಜನಿಕರು ಮಾಸ್ಕ್ ಧರಿಸುವುದು, ಲಸಿಕೆ ಪಡೆಯುವುದು ಅತ್ಯಗತ್ಯವಾಗಿದೆ ಎಂದರು. ಓಮಿಕ್ರಾನ್ ಸೋಂಕಿತ ಇತ್ತೀಚಿಗೆ ದೇಶ ಹಾಗೂ ಹೊರದೇಶಗಳಿಂದ ಬಂದಿದ್ದ ಅನೇಕ ವೈದ್ಯರೊಂದಿಗೆವೈದ್ಯ ನಗರದಲ್ಲಿ ನಡೆದ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು.
ಬಿಬಿಎಂಪಿ ಆಯುಕ್ತರ ಪ್ರಕಾರ, ಮತ್ತೋರ್ವ ವ್ಯಕ್ತಿ 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆಯಾಗಿದ್ದಾರೆ. ಅವರಿಗೆ ನವೆಂಬರ್ 20 ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ವರದಿ ಬಂದಿತ್ತು. ಇಂದು ಜೀನೊಮ್ ಸೀಕ್ವೆನ್ಸಿಂಗ್ ಫಲಿತಾಂಶ ಬಂದಿದ್ದು, ಓಮಿಕ್ರಾನ್ ಸೋಂಕಿ ಇರುವುದು ಪತ್ತೆಯಾಗಿದೆ. ಅವರನ್ನು ಹೋಟೆಲ್ ನಲ್ಲಿ ಐಸೋಲೇಷನ್ ಮಾಡಲಾಗಿತ್ತು. ಅವರ ಸಂಪರ್ಕಕ್ಕೆ ಬಂದಿದ್ದ 24 ಮಂದಿ ಪ್ರಾಥಮಿಕ ಸಂಪರ್ಕಿತರು ಹಾಗೂ 240 ದ್ವಿತೀಯ ಸಂಪರ್ಕಿತರ ಪರೀಕ್ಷೆ ಮಾಡಲಾಗಿದ್ದು, ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಆದಾಗ್ಯೂ, ಅವರ ಮೇಲೆ ನಿಗಾ ವಹಿಸಲಾಗಿದೆ. ದಕ್ಷಿಣ ಆಫ್ರಿಕಾ ಪ್ರಜೆ ಸ್ವಯಂ ಪ್ರೇರಿತವಾಗಿ ಮತ್ತೊಂದು ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿದೆ. ಈ ಹಿಂದೆಯೇ ಯೋಜಿಸಿದಂತೆ ಆತ ದುಬೈಗೆ ಹೋಗಿರುವುದಾಗಿ ಆಯುಕ್ತರು ವಿವರಿಸಿದರು.
ಬೆಂಗಳೂರಿನ 46 ವರ್ಷದ ವ್ಯಕ್ತಿಗೆ ನವೆಂಬರ್ 22 ರಂದು ಪಾಸಿಟಿವ್ ಪತ್ತೆಯಾಗಿತ್ತು. ಅದನ್ನು ನವೆಂಬರ್ 24 ರಂದು ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಎನ್ ಸಿಬಿಎಸ್ ಗೆ ಕಳುಹಿಸಲಾಗಿತ್ತು. ಅದರ ಫಲಿತಾಂಶ ಇದೀಗ ಬಂದಿದ್ದು, ಓಮಿಕ್ರಾನ್ ರೂಪಾಂತರ ಪತ್ತೆಯಾಗಿದೆ. ಆ ವ್ಯಕ್ತಿಯನ್ನು ಹೋಮ್ ಐಸೋಲೇಷನ್ ನಲ್ಲಿ ಇಡಲಾಗಿದೆ. ಆದರೆ, ಅವರಿಗೆ ಜ್ವರ, ತಲೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು. ಓಮಿಕ್ರಾನ್ ರೂಪಾಂತರ ಈಗಾಗಲೇ ಸಮುದಾಯಕ್ಕೆ ಹರಡಿರುವ ಬಗ್ಗೆ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ವೈರಾಲಾಜಿಸ್ಟ್ ಆತಂಕ ವ್ಯಕ್ತಪಡಿಸಿದ್ದಾರೆ.