ವಾಷಿಂಗ್ಟನ್: ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಪ್ರತಿ ವರ್ಷ ಫೋರ್ಬ್ಸ್ ನಿಯತಕಾಲಿಕೆ ಪ್ರಪಂಚದಾದ್ಯಂತ ನೀತಿ ನಿರೂಪಕರು, ವ್ಯಾಪಾರ, ಲೋಕೋಪಕಾರ, CEO ಗಳು ಸೇರಿದಂತೆ ವಿವಿಧ ವಲಯಗಳ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಪ್ರಕಟಿಸುತ್ತದೆ.
ಇಬ್ಬರಿಗೆ ಸ್ಥಾನ
ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ ಪಟ್ಟಿಯಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್ ಸ್ಥಾನ ಪಡೆದುಕೊಂಡಿದ್ದಾರೆ. 100 ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ 37ನೇ ಸ್ಥಾನ ಪಡೆದರೆ, ಫಲ್ಗುಣಿ ನಾಯರ್ 88ನೇ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತದ ರಾಜಕೀಯ ಇತಿಹಾಸದಲ್ಲಿ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಯನ್ನು ನಿರ್ಮಲಾ ಸೀತಾರಾಮನ್ ಪಡೆದುಕೊಂಡಿದ್ದಾರೆ. ಅದಕ್ಕೂ ಮುನ್ನ ಅವರು ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ನಿರ್ಮಲಾ ಸೀತಾರಾಮನ್ ಬಿಬಿಸಿಯಲ್ಲಿ ಕೆಲಸ ಮಾಡಿದ್ದರು.
Nike IPO ಮೂಲಕ ರಾಷ್ಟ್ರವ್ಯಾಪಿ ಸಂಚಲನ ಸೃಷ್ಟಿಸಿರುವ, ಸೌಂದರ್ಯ ಉತ್ಪನ್ನಗಳ ವಹಿವಾಟಿಗೆ ಕಾಲಿರಿಸಿದ ಫಲ್ಗುಣಿ ನಾಯರ್ ಬಹಳ ಹಿಂದಿನಿಂದಲೂ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಇತ್ತೀಚೆಗೆ ಐ ಪಿ ಒ ಪ್ರವೇಶಿಸಿದ ಮರು ದಿನವೇ ಕೋಟ್ಯಾಧಿಪತಿಯಾದರು. ಸೆಲ್ಫ್ ಮೇಡ್ ಭಾರತೀಯ ಮಹಿಳಾ ಬಿಲಿಯನೇರ್ ಎಂದು ಹೆಸರಾಗಿದ್ದಾರೆ.
ಮೊದಲ ಸ್ಥಾನದಲ್ಲಿ ಮೆಕೆಂಜಿ
ಫೋರ್ಬ್ಸ್‌ನ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಮೆಕೆಂಜಿ ಸ್ಕಾಟ್ ಅಗ್ರ ಸ್ಥಾನದಲ್ಲಿದ್ದಾರೆ. ಮೆಕೆಂಜಿ ಸ್ಕಾಟ್, ಅಮೆರಿಕಾ ಕಾದಂಬರಿಕಾರರಾಗಿದ್ದು, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಮಾಜಿ ಪತ್ನಿ. ಚಾರಿಟಿ ವಿಭಾಗದಲ್ಲಿ ಆಕೆ ನಡೆಸಿದ ಲೋಕೋಪಕಾರಿ ಸೇವೆಗಳಿಗಾಗಿ ಆಕೆಯನ್ನು ಫೋರ್ಬ್ಸ್ ಗುರುತಿಸಿದೆ. ಹಿಂದಿನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಈಗ 15ನೇ ಸ್ಥಾನದಲ್ಲಿದ್ದಾರೆ.