ಪತ್ತನಂತಿಟ್ಟ: ಶಬರಿಮಲೆ ವಿಚಾರವಾಗಿ ಹಿಂದೂ ಐಕ್ಯವೇದಿ ನೇತೃತ್ವದ ಹಿಂದೂ ಸಂಘಟನೆಗಳು ಮತ್ತೊಂದು ಆಂದೋಲನಕ್ಕೆ ಸಿದ್ಧತೆ ನಡೆಸಿವೆ.
ಮಂಡಲ ಉತ್ಸವ ಆಚರಣೆ ಆರಂಭವಾದಾಗಿನಿಂದ ಶಬರಿಮಲೆಯಿಂದ ಹೊರಬರುತ್ತಿರುವ ಸುದ್ದಿಗಳು ಕಳವಳಕಾರಿಯಾಗಿದೆ.
ಕೊರೊನಾ ಮಾನದಂಡಗಳನ್ನು ಉಲ್ಲೇಖಿಸಿ ಸರ್ಕಾರವು ಅಯ್ಯಪ್ಪ ಸ್ವಾಮಿ ಭಕ್ತರು ಸಾಂಪ್ರದಾಯಿಕ ಆಚರಣೆಗಳನ್ನು ಮಾಡುವುದನ್ನು ನಿಷೇಧಿಸಿದೆ.
ಆನ್‌ಲೈನ್ ಬುಕ್ಕಿಂಗ್ ವೆಬ್‌ಸೈಟ್ ಆಗಾಗ್ಗೆ ಡೌನ್ ಆಗುತ್ತಿದ್ದು, ಭೇಟಿಗಾಗಿ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳೂ ಇವೆ.
ಏತನ್ಮಧ್ಯೆ, ಅರವಣ ಪ್ರಸಾದವನ್ನು ತಯಾರಿಸಲು ಹಲಾಲ್ ಬೆಲ್ಲವನ್ನು ಬಳಸಲಾಗುತ್ತಿದೆ ಎಂಬ ವರದಿಯು ಭಕ್ತರಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ.
ಜೊತೆಗೆ ದೇವಸ್ವಂ ಮಂಡಳಿಯು ಅರಣ್ಯ ಮಾರ್ಗದ ಮೂಲಕ ಯಾತ್ರೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಹಿನ್ನೆಲೆಯಲ್ಲಿ ಭಕ್ತರ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಹಿಂದೂ ಸಂಘಟನೆಗಳು ಧರಣಿ ನಡೆಸುತ್ತಿವೆ.
ಕೊರೊನಾ ಮಾನದಂಡಗಳ ಕಟ್ಟುನಿಟ್ಟಿನ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದೆನ್ನುತ್ತಿದ್ದರೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಯ್ಯಪ್ಪ ಭಕ್ತರನ್ನು ಕುರಿಗಳನ್ನು ತುಂಬಿಸುವಂತೆ ಹೇರಿ ಕರೆದೊಯ್ಯುತ್ತಿರುವುದು ತೀವ್ರ ಚಿಂತಾಜನಕವೆಂದು,
ಕೊರೊನಾ ಹೆಸರಿನಲ್ಲಿ ದೇವಸ್ವಂ ಮಂಡಳಿಯ ಬೇಡಿಕೆ,ವಿನಂತಿಗಳನ್ನು ಗಾಳಿಗೆ ತೂರಿ ಸರ್ಕಾರ ಯಾತ್ರೆಯನ್ನು ಬುಡಮೇಲುಗೊಳಿಸುತ್ತಿದೆಯೆಂದು ವತ್ಸನ್ ತಿಲ್ಲಂಗೇರಿ ಆರೋಪಿಸಿದ್ದಾರೆ.
ಶಬರಿಮಲೆಯ ಧಾರ್ಮಿಕ ಸ್ವಾತಂತ್ರ್ಯದ ಘೋರ ಉಲ್ಲಂಘನೆಯಾಗಿದ್ದು, ಭಕ್ತರಿಗೆ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಅವಕಾಶ ನೀಡಲಾಗುತ್ತಿಲ್ಲ ಎಂದವರು ತಿಳಿಸಿರುವರು.
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಮಂಡಿಯೂರಿ ಕುಳಿತುಕೊಳ್ಳಬೇಕಾಯಿತು.ಈಗ
ಸರ್ಕಾರ ಭಕ್ತರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ
ರಾಜ್ಯದಲ್ಲಿ ಮಿಕ್ಕೆಲ್ಲವೂ ಸಹಜ ಸ್ಥಿತಿಯಲ್ಲಿದ್ದರೂ ಶಬರಿಮಲೆಗೆ ಮಾತ್ರ ನಿಷೇಧಾಜ್ಞೆ ಹೇರಿ
ಸರ್ಕಾರ ಸಂಕಷ್ಟಕ್ಕೊಳಪಡಿಸಿದೆ ಎಂದರು.
ಧನು ಮಾಸದ ಮೊದಲ ದಿನದಂದು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಭಕ್ತರು ನಿಷೇಧಾಜ್ಞೆ ಉಲ್ಲಂಘಿಸಿ ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಪಾದಯಾತ್ರೆ ನಡೆಸಲಿದ್ದಾರೆ ಎಂದು ತಿಲಂಗೇರಿ ಹೇಳಿರುವರು.