ತಿರುಮಲ: ತಿರುಪತಿ ತಿಮ್ಮಪ್ಪನ ಹಣದಲ್ಲಿ ಕ್ರೈಸ್ತ ಪಾದ್ರಿಗಳ ಪೋಷಣೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ತಳ್ಳಿ ಹಾಕಿದ್ದು, ಈ ಬಗ್ಗೆ ಆರೋಪ ಮಾಡಿರುವ ಯೂಟ್ಯೂಬ್ ಚಾನೆಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಭಕ್ತಾದಿಗಳನ್ನು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಜಾತಿವಾರು ವಿಂಗಡಿಸಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂದು ಭಾರತ್ ಮಾರ್ಗ್ ಎಂಬ ಯೂಟ್ಯೂಬ್ ಚಾನೆಲ್ ವರದಿ ಮಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಿಟಿಡಿ, ಈ ಅಪ ಪ್ರಚಾರವನ್ನು ತೀವ್ರವಾಗಿ ಖಂಡಿಸಿದೆ.
'ಕೊರೊನಾ ಲಾಕ್‌ಡೌನ್ ಸಮಯದಲ್ಲಿ 21 ದಿನಗಳ ಕಾಲ ವೆಂಕಟೇಶ್ವರ ಸ್ವಾಮಿಗೆ ನೈವೇದ್ಯ ಸಮರ್ಪಿಸಿರಲಿಲ್ಲ ಎಂಬ ಆ ವಾಹಿನಿಯ ಆರೋಪ ಸಂಪೂರ್ಣ ಸುಳ್ಳು. ಲಾಕ್‌ಡೌನ್ ಸಮಯದಲ್ಲಿ ಕೇವಲ ಭಕ್ತರಿಗೆ ಸ್ವಾಮಿಯ ದರ್ಶನ ರದ್ದುಗೊಳಿಸಿದ್ದು ಹೊರತು ಪಡಿಸಿ, ಸ್ವಾಮಿಗೆ ಪೂಜೆ, ನೈವೇದ್ಯ ಕೈಂಕರ್ಯಗಳು ಯಥಾರೀತಿ ಮುಂದುವರೆದಿದೆ ಎಂದು ಹೇಳಿದೆ.
ಅಂತೆಯೇ ಸನಾತನ ಹಿಂದೂ ಧರ್ಮದ ಪ್ರಚಾರ ನಡೆಸಿ, ಮತಾಂತರ ತಡೆಗೆ ಸಮರಸತಾ ಸೇವಾ ಪ್ರತಿಷ್ಠಾನದ ನೆರವಿನೊಂದಿಗೆ 2021ರ ಅಕ್ಟೋಬರ್ 7ರಿಂದ 14ರವರೆಗೆ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಬಡವರನ್ನು ಉಚಿತವಾಗಿ ತಿರುಮಲಕ್ಕೆ ಕರೆತಂದು . ಶ್ರೀವಾರಿ ಬ್ರಹ್ಮೋತ್ಸವ ದರ್ಶನ ವೀಕ್ಷಿಸುವ ವ್ಯವಸ್ಥೆ ಒದಗಿಸಿದೆ. ಅದೇ ರೀತಿ ವೈಕುಂಠ ಏಕಾದಶಿಯಂದು ತಿರುಮಲ ದೇವಸ್ಥಾನದಲ್ಲಿ ವೈಕುಂಠ ದ್ವಾರ ಮೂಲಕ ದರ್ಶನ ಕಲ್ಪಿಸಲು ಟಿಟಿಡಿ ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.
ತಿರುಪತಿ ತಿಮ್ಮಪ್ಪನ ಹಣದಲ್ಲಿ ಕ್ರೈಸ್ತ ಪಾದ್ರಿಗಳ ಪೋಷಣೆ ಮಾಡುತ್ತಿಲ್ಲ:
ರಾಜ್ಯ ಸರ್ಕಾರ ಟಿಟಿಡಿ ಹಣದಲ್ಲಿ ಕ್ರೈಸ್ತ ಪಾದ್ರಿಗಳನ್ನು ಪೋಷಿಸುತ್ತಿದೆ. ಜೆರುಸಲೇಂ, ಹಜ್ ಯಾತ್ರೆಗೆ ತಿರುಮಲ ನಿಧಿ ಬಳಸುತ್ತಿದೆ ಎಂಬ ಆರೋಪವನ್ನು ಟಿಟಿಡಿ ನಿರಾಕರಿಸಿದ್ದು, ಗೋಸಂರಕ್ಷಣೆಗೆ ಟಿಟಿಡಿ ಅವಿರತವಾಗಿ ಶ್ರಮಿಸುತ್ತಿದೆ. ತಿರುಪತಿ, ಪಲಮನೇರ್ ಗೋಶಾಲೆಗಳಲ್ಲಿ ದೇಶಿ ಗೋವುಗಳ ಆರೈಕೆ, ಸಂತತಿ ಹೆಚ್ಚಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ ಸತ್ಯಾಂಶ ಹೀಗಿದ್ದರೆ.. ಭಕ್ತರನ್ನು ದಾರಿ ತಪ್ಪಿಸುವ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ. ಈ ರೀತಿ ಅಪ ಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟಿಟಿಡಿ ಎಚ್ಚರಿಕೆ ನೀಡಿದೆ.