ಆಲಪ್ಪುಳ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೆ. ರೈಲ್ವೆ ಯೋಜನೆ ವಿರುದ್ಧ ಸ್ಥಳೀಯರು ಅಲಪ್ಪುಳದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಯೋಜನೆಗೆ ಒಳಪಡುವ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿದ ಅಧಿಕಾರಿಗಳನ್ನು ತಡೆಹಿಡಿದ ಮಹಿಳೆಯರನ್ನು ಪೋಲೀಸ್ ಕಸ್ಟಡಿಯಲ್ಲಿ ತೆಗೆದುಕೊಂಡರು. ಅಧಿಕಾರಿಗಳ ಭೇಟಿಗೆ ಹೆಚ್ಚಿನ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಮ್ಮ ಕೃಷಿ ಭೂಮಿಯನ್ನು ಹಾಳು ಮಾಡಿ ಈ ಯೋಜನೆ ಮಾಡಬಾರದು ಎಂಬುದು ಸ್ಥಳೀಯರ ಆಕ್ರೋಶವಾಗಿತ್ತು. ಕೇಂದ್ರ ರೈಲ್ವೇ ಮಂಡಳಿಯಿಂದಲೂ ಅನುಮೋದನೆ ಪಡೆದಿಲ್ಲ. ಜನರಿಗೆ ತೊಂದರೆಯಾಗುವುದು ಬೇಡ ಎಂದು ಸ್ಥಳೀಯರು ಹೇಳುತ್ತಿದ್ದು, ಈಗಾಗಲೇ ಅಧಿಕಾರಿಗಳಿಗೆ ತಮ್ಮ ನಿಲುವು ತಿಳಿಸಿದ್ದೇವೆ ಎಂದಿರುವರು.
ಹೈಕೋರ್ಟ್ ಆದೇಶವಿದೆ ಎಂದು ಪೋಲೀಸರು ಸೂಚಿಸಿದಾಗ, ಅವರು ಯೋಜನೆಯನ್ನು ವಿರೋಧಿಸಿದವರ ಪರವಾಗಿ ನ್ಯಾಯಾಲಯದ ಆದೇಶವನ್ನು ಪೋಲೀಸರಿಗೆ ತೋರಿಸಿದರು. ಕೆ ರೈಲು ಹೋರಾಟ ಸಮಿತಿ ಹಾಗೂ ಮುಳಂಕಾಡು ರೆಸಿಡೆನ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ದೀರ್ಘವಾದ ಪ್ರತಿಭಟನೆಯ ದೃಶ್ಯಗಳನ್ನು ಪೆÇೀಲೀಸರು ಮೊಬೈಲ್‍ನಲ್ಲಿ ಸೆರೆಹಿಡಿದಿರುವರು. ಈ ಬಗ್ಗೆ ಆಕ್ರೋಶ ವ್ಯಕ್ತವಾಯಿತು.
ನೂರನಾಡು, ವರನಡತ್ತ್ ಸೇರಿದಂತೆ ವಿವಿಧೆಡೆ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದರು. ಕೆ-ರೈಲ್ ಅಧಿಕಾರಿಗಳು ಯೋಜನಾ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಕೆ.ರೈಲು ಬೇಡವೇ ಬೇಡ ಎಂಬ ಘೋಷವಾಕ್ಯದಿಂದ ಪ್ರತಿಭಟಿಸಿದವರನ್ನು ಪೋಲೀಸರು ಬಲಪ್ರಯೋಗಿಸಿ ವಾಹನಗಳಿಗೆ ತುಂಬಿಸಿದರು. ಮಹಿಳೆಯರನ್ನು ವಶಕ್ಕೆ ಪಡೆದು ಠಾಣೆಗೆ ರವಾನಿಸಲಾಗಿದೆ. ಅಲ್ಪ ಪ್ರಮಾಣದ ಲಾಠಿ ಪ್ರಹಾರವೂ ನಡೆದಿದೆ.
ಕೃಷಿ ಸಚಿವ ಪಿ.ಎಸ್. ಪ್ರಸಾದ್ ಮನೆ ಬಳಿ ಪ್ರತಿಭಟನೆ ನಡೆಯುತ್ತಿದೆ. ಆದರೂ ಸಚಿವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ. ಜನರ ಸಮಸ್ಯೆ ಬಗೆಹರಿಸಿ ಸ್ಥಳೀಯರ ಪರ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಧರಣಿ ನಡೆಸುತ್ತಿದೆ.
ಸಚಿವ ಸಾಜಿ ಚೆರಿಯನ್ ಅವರ ಕ್ಷೇತ್ರವಾದ ಚೆಂಗನ್ನೂರಿನಲ್ಲಿ ಕೆ-ರೈಲ್ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.